ಮಗ ಚಲಾಯಿಸುತ್ತಿದ್ದ ಸ್ಕೂಟರಿಗೆ ಟಿಪ್ಪರ್ ಡಿಕ್ಕಿ ; ತಂದೆ ಮೃತ್ಯು

ಮಂಗಳ ಕಾರ್ಯಕ್ಕೆ ಸಿದ್ಧವಾಗುತ್ತಿದ್ದ ಮನೆಯಲ್ಲಿ ಸಾವಿನ ಕರಿನೆರಳು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕೆಲವೇ ದಿನಗಳಲ್ಲಿ ನಡೆಯಲಿರುವ ಮದುವೆಯ ಸಿದ್ಧತೆಯಲ್ಲಿದ್ದ ಮನೆಯ ಮಂದಿ ಸಂಚರಿಸುತ್ತಿದ್ದ ಸ್ಕೂಟರಿಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ, ಗಂಭೀರ ಗಾಯಗೊಂಡ ಸಹ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮದುವೆಯ ಮನೆಯಲ್ಲೀಗ ಸಾವಿನ ಕರಿನೆರಳು ಮಡುಗಟ್ಟಿದೆ.

ಮೃತರು ಉಚ್ಚಿಲ ಮುಳ್ಳಗುಡ್ಡೆ ಪೊಂಕ್ರಪಡ್ಪು ನಿವಾಸಿ ಅಬೂಬಕ್ಕರ್ ಇಸ್ಮಾಯಿಲ್ (60) ಆಗಿದ್ದಾರೆ. ಮಗ ಮಸೂರು (26) ಚಲಾಯಿಸುತ್ತಿದ್ದ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಅಬೂಬಕ್ಕರ್ ಸಂಚರಿಸುತ್ತಿದ್ದರು. ಎರ್ಮಾಳಿನ ಬುಧಗಿ ಪೆಟ್ರೋಲ್ ಬಂಕ್ ಬಳಿಯ ರಸ್ತೆ ಡೈವರ್ಶನ್ನಿನಲ್ಲಿ ಯೂ ಟರ್ನ್ ಮಾಡುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಗೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು ಸವಾರನಿಗೆ ಸಣ್ಣಪುಟ್ಟ ಗಾಯಗಳಾದರೆ ಹಿಂಬದಿ ಸವಾರ ಅಬೂಬಕ್ಕರ್ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಸಮಯ ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಟಿಪ್ಪರ್ ಚಾಲಕನ ಅಜಾಗರುಕತೆ ಕಾರಣ ಎಂಬುದಾಗಿ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.