ಗುಂಡು ಹಾರಿಸಿಕೊಂಡು ತಂದೆ ಸಾವು

ರಕ್ತದ ಮಡುವಿನಲ್ಲಿ ಬಿದ್ದಿರುವ ಇಂದ್ರಕುಮಾರ್ ಶವ

ಜೀಪ್ ವಿಚಾರದಲ್ಲಿ
ಅಪ್ಪ ಮಗನ ಜಗಳ

ನಮ್ಮ ಪ್ರತಿನಿಧಿ ವರದಿ
ವಿಟ್ಲ : ಅಟ್ಟಾಡಿಸುತ್ತಾ ನಾಡಕೋವಿಯಿಂದ ಎರಡು ಸುತ್ತು ಗುಂಡು ಹೊಡೆದು ಮಗನ ಕೊಲೆಗೆ ಯತ್ನಿಸಿದ ತಂದೆ ಬಳಿಕ ಅದೇ ಕೋವಿಯಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ವಿಟ್ಲದಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಪ್ರಸಿದ್ಧ ಕೃಷಿಕರಾಗಿರುವ ಇಂದ್ರಕುಮಾರ್ (64) ಜೀಪಿನ ವಿಚಾರದಲ್ಲಿ ಮಗನನ್ನೇ ಕೊಲೆ ಮಾಡಲು ಹೋಗಿ ತಾನೇ ಬಲಿಯಾದ ವ್ಯಕ್ತಿ.
ಸ್ವಂತ ಜೀಪು ಹೊಂದಿರುವ ಇಂದ್ರಕುಮಾರ್ ಮತ್ತು ಪುತ್ರ ಚಂದ್ರಹಾಸ(30)ನ ಮಧ್ಯೆ ಕಳೆದ ಕೆಲದಿನಗಳಿಂದ ನಡೆಯುತ್ತಿದ್ದ ಕಾದಾಟ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಸುಮಾರು ಹದಿನೈದು ಎಕರೆಗೂ ಮಿಕ್ಕಿದ ಕೃಷಿ ಜಮೀನಿನ ಮಾಲಿಕರಾಗಿರುವ ಇಂದ್ರಕುಮಾರ್ ಕೆಲವರ್ಷಗಳ ಹಿಂದೆ ಜೀಪು ಖರೀದಿಸಿದ್ದರು. ಕಿರಿಯ ಪುತ್ರ ಮೃದು ಸ್ವಭಾವದ ಚಂದ್ರಹಾಸ ತನ್ನ ಮನೆಯ ಜೀಪಿನಲ್ಲಿ ದುಡಿಯುತ್ತಾ ಪತ್ನಿ ಮತ್ತು ತಂದೆ-ತಾಯಿ ಜೊತೆಯಲ್ಲೇ ವಾಸವಾಗಿದ್ದ. ಪತ್ನಿ ತನ್ನ ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ ಎಂಟು ದಿನಗಳ ಹಿಂದಷ್ಟೆ ಮಗುವಿಗೆ ಜನ್ಮ ನೀಡಿದ್ದಳು. ಈ ಮಧ್ಯೆ ಇಂದ್ರಕುಮಾರ್ ತನ್ನ ಹೆಸರಿನಲ್ಲಿರುವ ಜೀಪನ್ನು ಮನೆಯಿಂದ ಕೊಂಡೊಯ್ಯದಂತೆ ಮಗ ಚಂದ್ರಹಾಸಗೆ ತಾಕೀತು ಮಾಡಿದ್ದರೆನ್ನಲಾಗಿದೆ. ಆದರೆ ಜೀಪಿನಲ್ಲಿ ದುಡಿಯುತ್ತಿದ್ದ ಚಂದ್ರಹಾಸ ತಂದೆಯ ಕಟ್ಟಪ್ಪಣೆಯನ್ನು ಕ್ಯಾರೇ ಮಾಡದೆ ಜೀಪಿನಲ್ಲಿ ಬಾಡಿಗೆ ಮಾಡುತ್ತಿದ್ದ. ಇದೇ ವಿಚಾರವಾಗಿ ತಂದೆ-ಮಗನ ಮಧ್ಯೆ ಪ್ರತಿನಿತ್ಯ ನಡೆಯುತ್ತಿದ್ದ ಕಾದಾಟ ಮತ್ತಷ್ಟು ಮುಂದುವರಿದು ಇಂದ್ರಕುಮಾರ್ ಕೋವಿ ಹಿಡಿದು ಮಗನಿಗೆ ಜೀವಬೆದರಿಕೆಯನ್ನೂ ಒಡ್ಡಿದ್ದರೆನ್ನಲಾಗಿದೆ. ಅಲ್ಲದೇ ತನ್ನ ಪುತ್ರನ ವಿರುದ್ಧವೇ ಇಂದ್ರಕುಮಾರ್ ವಿಟ್ಲ ಠಾಣೆಗೆ ಗುರುವಾರ ದೂರು ನೀಡಿದ್ದು, ತನಿಖೆ ನಡೆಸಿದ ಎಸೈ ನಾಗರಾಜ್ ಕೋವಿಯನ್ನು ಠಾಣೆಗೆ ಒಪ್ಪಿಸುವಂತೆ ಸೂಚಿಸಿದ್ದರೆನ್ನಲಾಗಿದೆ.

ಕೋವಿ ಹಿಡಿದು
ಅಟ್ಟಾಡಿಸಿದ
ಕೋವಿಯನ್ನು ಠಾಣೆಗೆ ಒಪ್ಪಿಸುವಂತೆ ಗುರುವಾರದಂದು ಎಸೈ ಹೇಳಿದ್ದರೂ ಇಂದ್ರಕುಮಾರ್ ಮಾತ್ರ ನೀಡಿಲ್ಲವಾಗಿತ್ತು. ಶುಕ್ರವಾರ ರಾತ್ರಿ 9.40ರ ಸುಮಾರಿಗೆ ಜೀಪಿನಲ್ಲಿ ಮನೆಗೆ ಬಂದ ಚಂದ್ರಹಾಸ ಇನ್ನೇನು ಸ್ನಾನ ಮಾಡಲು ತಯಾರಿ ನಡೆಸಿರುವಷ್ಟರಲ್ಲಿ ಮತ್ತೆ ಎಂದಿನಂತೆ ಮಗನ ಮೇಲೆ ರೌದ್ರಾವತಾರ ತಾಳಿದ ಇಂದ್ರಕುಮಾರ್ ಕೋವಿ ಹಿಡಿದು ಅಟ್ಟಾಡಿಸುತ್ತಿದ್ದಂತೆ ಚಂದ್ರಹಾಸ ಪ್ರಾಣರಕ್ಷಣೆಗಾಗಿ ಓಡಿದ್ದನೆನ್ನಲಾಗಿದೆ. ಮತ್ತಷ್ಟೂ ಕ್ರೋಧಗೊಂಡ ಅಪ್ಪ ಕೈಯಲ್ಲಿದ್ದ ನಾಡಕೋವಿಯಿಂದ ಮಗನಿಗೆ ಗುರಿಯಿಟ್ಟು ಎರಡು ಸುತ್ತು ಗುಂಡು ಹಾರಿಸಿದ್ದು, ರಾತ್ರಿಯಾದ ಕಾರಣ ಅದೃಷ್ಟವಶಾತ್ ಚಂದ್ರಹಾಸ ಪಾರಾಗಿದ್ದಾನೆ. ಗಂಡನ ಆವೇಶದಿಂದ ಭಯಗೊಂಡ ಇಂದ್ರಕುಮಾರ್ ಪತ್ನಿ ಕೂಡಾ ಮಗನಿಗೆ ತಪ್ಪಿಸಿಕೊಳ್ಳುವಂತೆ ಹೇಳುತ್ತಾ ತಾನೂ ಕೂಡಾ ಮನೆಯಿಂದ ಓಡಿ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಮನೆಯ ಮೆಟ್ಟಿಲಲ್ಲೇ
ಗುಂಡು ಹಾರಿಸಿದ
ತಾನು ಹಾರಿಸಿದ ಎರಡು ಸುತ್ತು ಗುಂಡಿಗೆ ಮಗ ಸತ್ತನೆಂದು ಭಾವಿಸಿದ ಅಪ್ಪ ಇಂದ್ರಕುಮಾರ್ ಗೇಟಿನ ಬಳಿಯಿಂದ ಮನೆಗೆ ಹೋಗಿ ಮೆಟ್ಟಿಲಲ್ಲಿ ಕುಳಿತು ಕೋವಿಯನ್ನು ಗಲ್ಲಕ್ಕೆ ಅದುಮಿಟ್ಟು ಮೂರನೇ ಗುಂಡು ಹಾರಿಸಿಕೊಂಡ. ಅಪ್ಪನ ಗುಂಡೇಟಿನಿಂದ ಅಲ್ಪಸ್ವಲ್ಪ ಗಾಯಗೊಂಡ (ಕೈ ಮತ್ತು ಬೆನ್ನಿಗೆ ಗುಂಡಿನ ಹರಳುಗಳು ಹೊಕ್ಕಿವೆ) ಚಂದ್ರಹಾಸ ಪೊಲೀಸರಿಗೆ ನೆರೆಯವರ ಮೂಲಕ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸರು ಬಂದು ನೋಡುವಷ್ಟರಲ್ಲಿ ಮನೆಯ ಮೆಟ್ಟಿಲ ಮೇಲೆ ತಲೆ ಛಿದ್ರಗೊಂಡ ಇಂದ್ರಕುಮಾರ್ ರಕ್ತದ ಮಡುವಿನಲ್ಲಿ ಬಂದೂಕಿನೊಂದಿಗೆ ಸತ್ತು ಬಿದ್ದಿರುವುದು ಕಂಡುಬಂದಿದೆ. ಆರ್ಥಿಕ ಸ್ಥಿತಿ ಸಾಕಷ್ಟು ಚೆನ್ನಾಗಿದ್ದ ಇಂದ್ರಕುಮಾರ್ ಇಂತಹ ಕೃತ್ಯ ಎಸಗಿರುವ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ರಾತೋರಾತ್ರಿ ಮನೆಯ ಮುಂದೆ ಬಾರೀ ಜನ ಜಮಾಯಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದು ಫೊರೆನ್ಸಿಕ್ ತಜ್ಞರು, ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇಂದ್ರಕುಮಾರ್ ಶವವನ್ನು ದೇರಳಕಟ್ಟೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ಗಾಯಾಳು ಪುತ್ರ ಚಂದ್ರಹಾಸ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.