ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

ಮೃತ ಆದಂ

* ಫಾಲೋ-ಅಪ್ *

ನಮ್ಮ ಪ್ರತಿನಿಧಿ ವರದಿ
ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55) ಎಂಬವರೇ ಮಗನಿಂದಲೇ ಹಲ್ಲೆಗೊಳಗಾಗಿದ್ದರು. ಮಗ ಅಬೂಬಕ್ಕರ್ (35) ಎಂಬವರು ರಾಡಿನಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಆದಂ ಅವರು ಸೋಮವಾರ ಮೃತಪಟ್ಟಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಗನೇ ತಂದೆಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಆದಂ ಅವರಿಗೆ ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿ ತರಕಾರಿ ಅಂಗಡಿಯೊಂದಿದ್ದು, ಅದನ್ನು ಪುತ್ರ ಅಬೂಬಕ್ಕರ್ ನೋಡಿಕೊಂಡಿದ್ದರು. ಕಳೆದ ಶನಿವಾರ ಅಲ್ಲಿಗೆ ಬಂದ ಆದಂ ಹಾಗೂ ಪುತ್ರ ಅಬೂಬಕ್ಕರ್ ಮಧ್ಯೆ ಆಸ್ತಿಯ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ ಅಬೂಬಕ್ಕರ್ ಅವರು ಅಂಗಡಿಯೊಳಗಿದ್ದ ರಾಡ್‍ನಿಂದ ಆದಂ ಅವರ ಮೇಲೆ ಹಲ್ಲೆ ನಡೆಸಿದ್ದರು. ತಲೆಗೆ ಗಂಭೀರ ಗಾಯಗೊಂಡು ಬಿದ್ದಿದ್ದ ಆದಂ ಅವರನ್ನು ಬಳಿಕ ಅಬೂಬಕ್ಕರ್ ಅವರೇ ಉಪ್ಪಿನಂಗಡಿ ಹಾಗೂ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ ಮಧ್ಯಾಹ್ನದವರೆಗೆ ಆಸ್ಪತ್ರೆಯಲ್ಲಿಯೇ ಇದ್ದ ಅಬೂಬಕ್ಕರ್ ಅವರು ಭಾನುವಾರ ಮಧ್ಯಾಹ್ನವಾದರೂ ತಂದೆಗೆ ಪ್ರಜ್ಞೆ ಮರಳಿ ಬಾರದಿರುವುದನ್ನು ಗಮನಿಸಿ, ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಆದಂ ಅವರ ಅಳಿಯ ಸಲೀಂ ಎಂಬವರು ಭಾನುವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಬೂಬಕ್ಕರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಆದರೆ ಆದಂ ಅವರು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಬಳಿಕ ಅಬೂಬಕ್ಕರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಆದಂ ಅವರಿಗೆ ಅಬೂಬಕ್ಕರ್ ಒಬ್ಬನೇ ಪುತ್ರನಾಗಿದ್ದು, ಉಳಿದ ಮೂವರು ಪುತ್ರಿಯರು. ಅವರೆಲ್ಲರನ್ನೂ ಮದುವೆ ಮಾಡಿಕೊಟ್ಟಿದ್ದರು. ಅಬೂಬಕ್ಕರ್ ಅವರಿಗೂ ಕಳೆದ ಸುಮಾರು ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಆರು ತಿಂಗಳ ಗಂಡು ಮಗುವೊಂದಿದೆ. ಕಳೆದ ನಾಲ್ಕು ವರ್ಷದ ಹಿಂದೆ ಆದಂ ಅವರ ಪತ್ನಿ ತೀರಿ ಹೋಗಿದ್ದು, ಬಳಿಕ ಆದಂ ಹಾಗೂ ಅಬೂಬಕ್ಕರ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಲ್ಲಿ ಆಸ್ತಿ ಹೊಂದಿದ್ದ ಆದಂ ಅವರು ತನ್ನ ಪುತ್ರಿಯರಿಗೂ ಆಸ್ತಿಯಲ್ಲಿ ಪಾಲು ನೀಡಿದ್ದು, ಇದುವೇ ಪುತ್ರನ ಮನಸ್ತಾಪಕ್ಕೆ ಕಾರಣವಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.