ಭಾರತದಲ್ಲಿ ಫ್ಯಾಸಿಸಂ : ನಾಗರಿಕ ಹಕ್ಕು ಪ್ರತಿಪಾದಕ ಬಾಲಗೋಪಾಲ್ ವ್ಯಾಖ್ಯಾನ ಇಂದಿಗೂ ಪ್ರಸ್ತುತ

ಅವಕಾಶವಂಚಿತ ಗುಂಪುಗಳಲ್ಲಿ ಇರುವ ದ್ವೇಷ ಮತ್ತು ಅಸೂಯೆ ಹಾಗೂ ಪರಸ್ಪರ ವೈರತ್ವವನ್ನು ಹೋಗಲಾಡಿಸುವುದು ಇಂದಿನ ಸಂದರ್ಭದಲ್ಲಿ ಎಷ್ಟು ಅಗತ್ಯ ಎನ್ನುವುದನ್ನು ಬಾಲಗೋಪಾಲ್ ಅವರ ಪ್ರತಿಪಾದನೆಯಲ್ಲಿ ಸ್ಪಷ್ಟವಾಗಿ ಕಾಣಬಹುದು.

  • ವಿ ಗೀತಾ

ಮೊನ್ನೆ ಅಕ್ಟೋಬರ್ 8ಕ್ಕೆ ಖ್ಯಾತ ಮಾನವ ಹಕ್ಕು ಹೋರಾಟಗಾರ ಬಾಲಗೋಪಾಲ್ ನಿಧನರಾಗಿ ಎಂಟು ವರ್ಷ ತುಂಬಿದೆ. ಭಾರತದ ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ಕುರಿತ ಬಾಲಗೋಪಾಲ್ ಅವರ ನಿಲುವು ಮತ್ತು ಪ್ರತಿಪಾದನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅವರು ಫೆಬ್ರವರಿ 1989ರಲ್ಲಿ ಬರೆದ `ರಾಜಕಾರಣದಲ್ಲಿ ಗೂಂಡಾಗಿರಿಯ ಉಗಮ’ ಮತ್ತು 1993ರಲ್ಲಿ ಬರೆದ `ಡಿಸೆಂಬರ್ 6, 1992 ಏಕೆ ಸಂಭವಿಸಿತು?’ ಎಂಬ ಎರಡು ಪ್ರಬಂಧಗಳು ಈ ನಿಟ್ಟಿನಲ್ಲಿ ಮಹತ್ವ ಪಡೆಯುತ್ತವೆ.

ಐರೋಪ್ಯ ರಾಷ್ಟ್ರಗಳ ಫ್ಯಾಸಿಸ್ಟ್ ಪ್ರವೃತ್ತಿಯನ್ನು ಬದಿಗಿಟ್ಟು ಭಾರತದಲ್ಲಿ ಫ್ಯಾಸಿಸಂ ಒಂದು ರಾಜಕೀಯ ಆದ್ಯತೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅದ್ಭುತವಾಗಿ ವಿವರಿಸಿದ್ದಾರೆ. ಫ್ಯಾಸಿಸಂ ಒಂದೆಡೆ ಪ್ರತಿಕ್ರಿಯಾ ರೂಪದಲ್ಲಿ ವ್ಯಕ್ತವಾದರೆ ಮತ್ತೊಂದೆಡೆ ಕ್ರಿಯಾಶೀಲತೆಯಿಂದ ವ್ಯಕ್ತವಾಗುತ್ತದೆ ಎಂದು ಹೇಳುತ್ತಿದ್ದ ಬಾಲಗೋಪಾಲ್, ಪ್ರಭುತ್ವ ತನ್ನೊಳಗಿನ ವೈರುಧ್ಯಗಳಿಗೆ ಪರಿಹಾರ ಕಂಡುಕೊಳ್ಳಲಾಗದೆ ಹಿಂಸಾತ್ಮಕ ಮಾರ್ಗಗಳ ಮೂಲಕ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಫ್ಯಾಸಿಸಂ ಅನಾವರಣಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಿದ್ದರು.

ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿ ಸರ್ಕಾರ ಜನಸಾಮಾನ್ಯರಿಗೆ ಸವಲತ್ತುಗಳನ್ನು ನೀಡಲು ವಿಫಲವಾದಾಗ ಆಳುವ ವರ್ಗಗಳು ನಕಾರಾತ್ಮಕ ಧೋರಣೆಯನ್ನು ತಾಳುತ್ತವೆ ಎಂದು ಹೇಳುತ್ತಿದ್ದ ಬಾಲಗೋಪಾಲ್, 1980ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೆಲವು ಶಾಸನಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ, ಸಶಸ್ತ್ರ ಪಡೆಗಳ ಕಾಯ್ದೆಯನ್ನು ಪಂಜಾಬಿಗೆ ವಿಸ್ತರಿಸಿದ್ದು, ಭಯೋತ್ಪಾದನೆ ಪೀಡಿತ ಪ್ರದೇಶಗಳ ಕಾಯ್ದೆ, ಟಾಡಾ ಇತ್ಯಾದಿ ಶಾಸನಗಳು ಇಲ್ಲಿ ಪ್ರಮುಖವಾಗಿ ಕಾಣುತ್ತವೆ.

ಬಾಲಗೋಪಾಲ್ ಅವರ ಪ್ರತಿಪಾದನೆಯನ್ನು ಸಮಕಾಲೀನ ಕಾಲಘಟ್ಟದಲ್ಲಿ ನಿಂತು ನೋಡಿದಾಗ ಪ್ರಸ್ತುತ ಸಂದರ್ಭದಲ್ಲಿ ಈ ವ್ಯಾಖ್ಯಾನ ಹೆಚ್ಚು ಪ್ರಸ್ತುತತೆ ಪಡೆಯುತ್ತದೆ. ದೇಶದ ಅರ್ಥವ್ಯವಸ್ಥೆ ಜಡಗಟ್ಟಿದೆ, ಸಾರ್ವಜನಿಕ ವಲಯದಲ್ಲಿ ರಾಜಕೀಯ ಪುಂಡಾಟಿಕೆ ಹೆಚ್ಚಾಗಿದೆ. ಸ್ವಘೋಷಿತ ರಕ್ಷಣಾ ಪಡೆಗಳು ಸಮಾಜದ ಮೇಲೆ ನಿಗ್ರಹ ಸಾಧಿಸುತ್ತಿವೆ. ಆಧುನಿಕ ವಿದ್ಯುನ್ಮಾನ ತಂತ್ರಜ್ಞಾನದ ಮೂಲಕವೂ ಈ ಪುಂಡ ಗುಂಪುಗಳು ತಮ್ಮ ರಾಜಕೀಯ ದ್ವೇಷವನ್ನು ಹರಡುತ್ತಿದ್ದು ಹಿಂಸೆಯಲ್ಲಿ ತೊಡಗುತ್ತಿವೆ.

ಇಂದಿನ ಸನ್ನಿವೇಶದಲ್ಲಿ ಪ್ರಭುತ್ವ ತಾನು ಜಾರಿಗೊಳಿಸುವ ನೀತಿಗಳು ಕಾನೂನುಬದ್ಧವಾಗಿದೆಯೇ ಅಥವಾ ಸಾಂವಿಧಾನಿಕ ಸಿಂಧುತ್ವ ಪಡೆದಿದೆಯೇ ಎಂಬ ಪ್ರಜೆಗಳ ಕಾಳಜಿಯನ್ನು ಲೆಕ್ಕಿಸುತ್ತಲೇ ಇಲ್ಲ. ಬದಲಾಗಿ ಕಾನೂನು ಪಾಲನೆಯ ಚೌಕಟ್ಟಿನಲ್ಲಿ ಕಾನೂನು ಭಂಗಗೊಳಿಸುವ ದುಷ್ಕøತ್ಯಗಳನ್ನು ಸಮರ್ಥಿಸುತ್ತದೆ. ದಾದ್ರಿ ಮತ್ತು ಊನ ಕೇವಲ ನಿದರ್ಶನಗಳಷ್ಟೆ. ಫ್ಯಾಸಿಸ್ಟ್ ಧೋರಣೆಯಲ್ಲಿ ಪ್ರಭುತ್ವ ಕಾನೂನು ರಕ್ಷಣೆಯನ್ನು ಪಡೆಯಲು ಕೇವಲ ರಾಜಕೀಯ ಮಾರ್ಗಗಳನ್ನು ಮಾತ್ರವೇ ಅನುಸರಿಸದೆ ಸಾಮಾಜಿಕ ಮಾರ್ಗಗಳನ್ನೂ ಅನುಸರಿಸುತ್ತದೆ. ಹಾಗಾಗಿ ಹಿಟ್ಲರ್ ಮತ್ತು ಮುಸೋಲಿನಿಯಂತೆ ಭಾರತದ ಫ್ಯಾಸಿಸಂ ಸಮಾಜವಾದ ಅಥವಾ ಪ್ರಜಾತಂತ್ರದ ಚೌಕಟ್ಟಿನಲ್ಲಿ ಅನಾವರಣವಾಗುವುದಿಲ್ಲ. ಹಾಗಾಗಿ ಹಿಂದುತ್ವ ಶಕ್ತಿಗಳು ಪ್ರತಿಪಾದಿಸುತ್ತಿರುವ ಫ್ಯಾಸಿಸ್ಟ್ ಧೋರಣೆ, ದೇಶದ ಶೋಷಿತ, ದಮನಿತ ಜನಸಮುದಾಯಗಳ ಹತಾಶೆ ಮತ್ತು ಆಕ್ರೋಶಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ತನ್ನ ಅಧಿಪತ್ಯವನ್ನು ಸಾಧಿಸುತ್ತದೆ ಎಂದು ಬಾಲಗೋಪಾಲ್ ಪ್ರತಿಪಾದಿಸಿದ್ದರು.

ಪ್ರತಿರೋಧವನ್ನು ವ್ಯಕ್ತಪಡಿಸುವ ಪ್ರಕ್ರಿಯೆ ಔಪಚಾರಿಕೆಯನ್ನು ಪಡೆಯುತ್ತಿದ್ದು, ಪ್ರತಿರೋಧದ ದನಿಗಳನ್ನು ಅಡಗಿಸುವ ಹಿಂಸಾತ್ಮಕ ಧೋರಣೆಗೆ ಪ್ರಭುತ್ವವೇ ರಕ್ಷಣೆ ನೀಡುತ್ತದೆ ಎಂದು ಬಾಲಗೋಪಾಲ್ ಹೇಳುತ್ತಿದ್ದುದು ಇಂದು ಸತ್ಯ ಎನಿಸುತ್ತಿದೆ. ಈ ಸನ್ನಿವೇಶದಲ್ಲಿ ಪ್ರಜಾತಂತ್ರ ಮೌಲ್ಯಗಳ ಭರವಸೆಯ ಮೇಲೆ ಪ್ರಜಾತಾಂತ್ರಿಕ ಶಕ್ತಿಗಳನ್ನು ಒಂದುಗೂಡಿಸುವುದು ಅತ್ಯವಶ್ಯ. ಅವಕಾಶವಂಚಿತ ಗುಂಪುಗಳಲ್ಲಿ ಇರುವ ದ್ವೇಷ ಮತ್ತು ಅಸೂಯೆ ಹಾಗೂ ಪರಸ್ಪರ ವೈರತ್ವವನ್ನು ಹೋಗಲಾಡಿಸುವುದು ಇಂದಿನ ಸಂದರ್ಭದಲ್ಲಿ ಎಷ್ಟು ಅಗತ್ಯ ಎನ್ನುವುದನ್ನು ಬಾಲಗೋಪಾಲ್ ಅವರ ಪ್ರತಿಪಾದನೆಯಲ್ಲಿ ಸ್ಪಷ್ಟವಾಗಿ ಕಾಣಬಹುದು.