ಬೆಳೆವಿಮೆ ನೀಡದ ಕಂಪೆನಿ ವಿರುದ್ಧ ರೈತರಿಂದ ಕಾನೂನು ಹೋರಾಟ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಹವಾಮಾನ ಆಧರಿತ ಬೆಳೆವಿಮೆಯನ್ನು ರೈತರಿಗೆ ನೀಡದೇ ಸತಾಯಿಸುತ್ತಿರುವ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರನ್ಸ್ ಕಂಪೆನಿ ಹಾಗೂ ಸಂಬಂಧಪಟ್ಟವರ ವಿರುದ್ಧ ರೈತರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಬೆಳೆಹಾನಿಯಾಗುವ ಸಂಭವ ಹೆಚ್ಚಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ತನ್ನ ಮಹಾತ್ವಾಕಾಂಕ್ಷೆಯ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಪ್ರಾರಂಭಿಸಿತ್ತು, ಯೋಜನೆಯಂತೆ ಹವಾಮಾನ ಆಧರಿತ ಬೆಳೆವಿಮೆ ಮಾಡಿಸಿಕೊಳ್ಳಬಹುದಾಗಿದ್ದು, ಈ ಯೋಜನೆಯಂತೆ ಯುನಿವರ್ಸಲ್ ಸೊಂಪೊ ಎಂಬ ಇನ್ಸುರೆನ್ಸ್ ಕಂಪೆನಿಯು ರೈತರಿಂದ ಪ್ರೀಮಿಯಂ ಕಟ್ಟಿಸಿಕೊಂಡಿತ್ತು. ಈ ವಿಮಾ ಯೋಜನೆಯಂತೆ ರಾಷ್ಟ್ರೀಯ ಬ್ಯಾಂಕ್ ಇಲ್ಲವೇ ವಿಎಸ್ಸೆಸ್ಸುಗಳ ಮೂಲಕ ಪ್ರೀಮಿಯಂ ಕಟ್ಟಲು ಅವಕಾಶವಿತ್ತು.

ಅವಧಿಯ ಮೊದಲು ಪ್ರೀಮಿಯಂ ಹಣ ಮತ್ತು ಕಾಗದ ಪತ್ರಗಳನ್ನು ರೈತರು ಒದಗಿಸಿದ್ದರು. ಯಾವ ಬ್ಯಾಂಕುಗಳಿಂದ ಪ್ರೀಮಿಯಂ ಮತ್ತು ಕಾಗದ ಪತ್ರಗಳನ್ನು ಕಳುಹಿಸಿದ್ದಾರೋ ಆ ಬ್ಯಾಂಕ್ ಹಾಗೂ ಇನ್ಸುರೆನ್ಸ್ ಕಂಪೆನಿಯ ನಡುವಿನ ತಾಂತ್ರಿಕ ಸಮಸ್ಯೆಯಿಂದ ಪಡೆದ ಹಣ ಹಾಗೂ ಕಾಗದ ಪತ್ರಗಳನ್ನು ಸರಿಯಾಗಿ ಬಟವಡೆ ಮಾಡಿಕೊಳ್ಳಲಾಗಿಲ್ಲ. ಇದರಿಂದ ಪ್ರೀಮಿಯಂ ತುಂಬಿದ ರೈತರನ್ನು ನಡುನೀರಿನಲ್ಲಿ ಬಿಟ್ಟಂತಾಗಿದೆ. ಕಳೆದ ಬಾರಿಯೂ ಹವಾಮಾನ ವೈಪರಿತ್ಯವಾದ ದಾಖಲೆ ದೊರೆತರೂ ಸಹ ಒಪ್ಪದೇ ವಿಮಾ ಹಣ ನೀಡದೇ ಕಂಪೆನಿ ಮತ್ತು ಇತರೆ ಸಂಸ್ಥೆಗಳು ರೈತರಿಗೆ ಸರಿಯಾದ ಸೇವೆ ನೀಡಿಲ್ಲ ಎಂಬ ಆಪಾದನೆ ಇದೆ. ಕೇಂದ್ರ ಸರ್ಕಾರದ ಈ ಒಳ್ಳೆಯ ಯೋಜನೆಯನ್ನು ವಿಮಾ ಕಂಪೆನಿ ಮತ್ತು ಕೆಲವು ಸಂಸ್ಥೆಗಳು ಹಳ್ಳ ಹಿಡಿಸುತ್ತಿದ್ದು, ರೈತರು ಒಗ್ಗಟ್ಟಾಗುತ್ತಿದ್ದಾರೆ. ವಕೀಲರು ಈ ಬಗ್ಗೆ ನೋಟಿಸ್ ನೀಡಿದ್ದು, ರೈತರಿಗೆ ನ್ಯಾಯ ನೀಡದಿದ್ದರೆ ಕಾನೂನು ರೀತಿಯ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಸಿದ್ದಾರೆ.