`ರೈತರು ಬೆಳೆ ವಿವರ ದಾಖಲಿಸಲು ಮೊಬೈಲ್ ಆ್ಯಪ್ ಬಳಸಬೇಕು’

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ರೈತರು ತಮ್ಮ ಪಹಣಿಯ ಬೆಳೆ ದಾಖಲೀಕರಣಗೊಳಿಸಲು ಜಿಲ್ಲಾಡಳಿತ ಬಿಡುಗಡೆಗೊಳಿಸಿರುವ ಮೊಬೈಲ್ ಆ್ಯಪ್ ಬಳಸುವಂತೆ ಭಾರತೀಯ ಕಿಸಾನ್ ಸಂಘ ರೈತರಿಗೆ ಕರೆ ನೀಡಿದೆ.

ಈಗಾಗಲೇ ಕೃಷಿಕರ ಪಹಣಿಯಲ್ಲಿ ಬೆಳೆ ದಾಖಲೀಕರಣ ಮಾಡುವ ಕಾರ್ಯ ಕಂದಾಯ ಇಲಾಖೆಯಿಂದ ನಡೆಯುತ್ತಿದ್ದರೂ ಇನ್ನೂ ಅದು ಪೂರ್ಣಗೊಂಡಿಲ್ಲ. ರೈತರು ತಮ್ಮ ಜಮೀನಿನಲ್ಲಿರುವ ಬೆಳೆ ವಿವರ ದಾಖಲಿಸಲು ಜಿಲ್ಲಾಡಳಿತ ಈಗಾಗಲೇ ಬಿಡುಗಡೆಗೊಳಿಸಿರುವ ಆ್ಯಪ್ ಬಳಸಿ ಸುಲಭವಾಗಿ ಈ ಕಾರ್ಯ ಮಾಡಬಹುದಾಗಿದೆ. ಪ್ರತೀ ಗ್ರಾಮದ ಒಬ್ಬ ರೈತ ಈ ಆ್ಯಪನ್ನು ತನ್ನ ಮೊಬೈಲಿನಲ್ಲಿ ಅಳವಡಿಸಿಕೊಂಡು ಕೃಷಿ ಭೂಮಿಯಿಂದ 500 ಮೀಟರ್ ಒಳಗಡೆ ನಿಂತು ಬೆಳೆಗಳ ಫೋಟೋಗಳನ್ನು ತೆಗೆದು ರೈತರ ಆಧಾರ್ ಸಂಖ್ಯೆಗಳನ್ನು ನಮೂದಿಸಿ ದಾಖಲಿಸಿಕೊಳ್ಳಬಹುದು. ಬೆಳೆಗಳ ಜೊತೆಗೆ ಅರಣ್ಯ ಪ್ರದೇಶಗಳನ್ನು ಕೂಡಾ ದಾಖಲಿಸುವ ಸಂದರ್ಭದಲ್ಲಿ ಅಲ್ಲಿ ಬೆಳೆದಿರುವ ಮರಗಳನ್ನು ಆಯ್ಕೆ ಮಾಡಿ ದಾಖಲಿಸಬೇಕು. ಇಲ್ಲವಾದರೆ ಅಲ್ಲಿ ಯಾವುದೇ ಬೆಳೆ ಬೆಳೆದಿಲ್ಲವೆಂಬ ತಪ್ಪು ಮಾಹಿತಿಯನ್ನು ನೀಡಿದಂತಾಗುತ್ತದೆ ಎಂದು ಭಾಕಿಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅವರು ಭಾಕಿಸಂ  ತಾಲೂಕು ಸಮಿತಿ ಮಾಸಿಕ ಸಭೆಯಲ್ಲಿ ತಿಳಿಸಿದರು.

ರೈತರ ವಿದ್ಯುತ್ ಪಂಪ್ಸೆಟ್ಟುಗಳ ಬಿಲ್ ಹಾಗೂ ಇತರ ವಿದ್ಯುತ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ವಿದ್ಯುತ್ತಿಗೆ ಸಂಬಂಧಪಟ್ಟ ತೊಂದರೆಗಳೇನಾದರೂ ಇದ್ದಲ್ಲಿ ಸಂಘದ ಕಾರ್ಯಾಲಯದಲ್ಲಿ ಲಿಖಿತ ದೂರು ನೀಡಬೇಕೆಂದು ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ ತಿಳಿಸಿದರು.