ನೋಟು ಅಮಾನ್ಯ : ರೈತರಿಗೆ ಹೊಡೆತ

ಸಾಂದರ್ಭಿಕ ಚಿತ್ರ

ವಿಶೇಷ ವರದಿ

ಕಾಸರಗೋಡು : ದೇಶದೆಲ್ಲೆಡೆ ಇದೀಗ ನೋಟು ಅಮಾನ್ಯಗೊಳಿಸಿದ ಬಳಿಕ ರಾಜ್ಯದ ಕೃಷಿಕರು ಕಂಗಾಲಾಗಿದ್ದಾರೆ. ಅದರಲ್ಲೂ ಅಡಿಕೆ, ಶುಂಠಿ ಬೆಳೆಗಾರರು, ಕೂಲಿಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗುವ ದಯನೀಯ ಸ್ಥಿತಿ ಬಂದಿದೆ. ಹಾಲು ವ್ಯಾಪಾರ, ಚಹಾ ಎಲೆಗಳು, ಕಾಡುತ್ಪನ್ನಗಳ ಸಂಗ್ರಹಿಸಿ ಮಾರಾಟ ಮಾಡುವ ಕೂಲಿಕಾರ್ಮಿಕರಿಗೆ ನೋಟು ಅಮಾನ್ಯ ಹೆಚ್ಚಿನ ಹೊಡೆತ ನೀಡಿದೆ. ಸಾಕಷ್ಟು ಪ್ರಮಾಣದಲ್ಲಿ ನಗದು ವ್ಯವಹಾರ ನಡೆಯದಿರುವ ಕಾರಣದಿಂದಾಗಿ ಜನ ಬ್ಯಾಂಕಿನ ಮುಂಭಾಗದಲ್ಲಿ ಸರದಿ ಸಾಲು ನಿಂತುಕೊಂಡು ತಮ್ಮ ದುಡಿಮೆಯನ್ನೂ ಮಾಡಲಾಗದ ಸಂಕಷ್ಟ ಸ್ಥಿತಿ ಎದುರಾಗಿದೆ.

ರೈತರ ಸಮಸ್ಯೆಗಳ ಬಗ್ಗೆ ಅಖಿಲ ಭಾರತೀಯ ಕಿಸಾನ್ ಸಭಾದ ರಾಷ್ಟ್ರೀಯ ಖಜಾಂಚಿ ಪಿ ಕೃಷ್ಣ ಪ್ರಸಾದ್ ಅವರು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಶೇಷವಾಗಿ ರೈತಾಪಿ ವಲಯದಲ್ಲಿ ನೋಟು ಅಮಾನ್ಯಗೊಳಿಸಿರುವುದು ಅವರನ್ನು ಕಂಗಾಲಾಗುವಂತೆ ಮಾಡಿದೆ. ಶುಂಠಿ ಮತ್ತು ಅಡಿಕೆ ಬೆಳೆಗಾರರು ಬೆಲೆ ಇಳಿಕೆಯಿಂದ ಅಧೀರರಾಗಿದ್ದಾರೆ. ಕಿಲೋ ಅಡಿಕೆಗೆ ಕಳೆದ ವರ್ಷ 90 ರೂ ಇದ್ದರೆ ಈ ಬಾರಿ ಅದು 60 ರೂಪಾಯಿಗೆ ಕುಸಿದಿದೆ.

ಮಾರುಕಟ್ಟೆಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿಸುವವರೇ ಇಲ್ಲವಾಗಿದ್ದಾರೆ. ಸೊಸೈಟಿಗಳಿಗೆ ಹಾಲು ವಿತರಣೆ ಮಾಡಿದ, ಕಾಡುತ್ಪತ್ತಿಗಳನ್ನು, ಚಹಾದ ಎಲೆಗಳನ್ನು ಸಂಗ್ರಹಿಸಿ ತಂದವರಿಗೆ ಹಣ ನೀಡಲು ದುಡ್ಡಿಲ್ಲ ಎಂದು ಉದ್ಯಮಿ ಬೇಬಿ ವರ್ಗೀಸ್ ಹೇಳಿದ್ದಾರೆ.