ಕೃಷಿ ಸಾಲ ಮನ್ನಾ ಮಾಡಲು ರೈತ ಸಮ್ಮೇಳನದಲ್ಲಿ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : “ಸಮಗ್ರ ಭೂ ಹಂಚಿಕೆ ಮಾಡಲಾಗದ ಹಾಗೂ ರೈತರ ಪರ ನಿರ್ಲಕ್ಷ್ಯ ಧೋರಣೆಯ ಕಾಂಗ್ರೆಸ್, ಬಿಜೆಪಿಗಳ ದುರಾಡಳಿತದಿಂದ ರೈತ ಆತ್ಮಹತ್ಯೆ ಮಾಡುವಂತಹ ದುರಂತ ನಮ್ಮ ಮುಂದಿದ್ದು, ರೈತರ ಸಾಲ ಮನ್ನಾ ಮಾಡಲು ಸಿದ್ಧವಿಲ್ಲದ ಸರಕಾರ ಕಾರ್ಪೊರೇಟ್ ಮಾಲಕರ ಸಾಲ ಮನ್ನಾ ಮಾಡಿ ಅವರ ಹಿತ ರಕ್ಷಿಸುತ್ತಿದೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದ ಕ ಜಿಲ್ಲಾದ್ಯಕ್ಷ ಕೆ ಆರ್ ಶ್ರೀಯಾನ್ ಹೇಳಿದರು.

ಪಾಂಗಳ ಲಕ್ಷ್ಮಣ ಗೌಡ ಅಧ್ಯಕ್ಷತೆಯಲ್ಲಿ ಇಲ್ಲಿನ ಅಂಬೇಡ್ಕರ್ ಭವನದ ಕೆ ವಿ ರಾವ್ ವೇದಿಕೆಯಲ್ಲಿ ನಡೆದ ಕರ್ನಾಟಕ ಪ್ರಾಂತರೈತ ಸಂಘದ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತಾಡುತ್ತಿದ್ದ ಅವರು, “ನೋಟು ಬದಲಾವಣೆ ಮೂಲಕವೂ ರೈತರನ್ನು ಸಂಕಷ್ಟಕ್ಕೀಡು ಮಾಡುವ, ಕಪ್ಪು ದೊರೆಗಳ ಹಿತವನ್ನೇ ಕಾಪಾಡಿದ ಪ್ರಧಾನಿ ನರೇಂದ್ರ ಮೋದಿ ಸರಕಾರ ಧರ್ಮವನ್ನೂ, ಜನರನ್ನೂ ನಾಶ ಮಾಡುತ್ತಿದೆ” ಎಂದು ಟೀಕಿಸಿದರು.

“ಅಂದು ಭೂಮಸೂದೆಗಾಗಿ ಕಾ ಕೃಷ್ಣ ಶೆಟ್ಟಿ ನಾಯಕತ್ವದಲ್ಲಿ ರೈತರು ಒಂದುಗೂಡಿದಂತೆ ಇಂದು ರೈತರು ಸಂಘಟಿತರಾಗಿ ಬಲಿಷ್ಟ ರಾಜಕೀಯ ಶಕ್ತಿಯಾಗಿ ಬೆಳೆದು ಬರಬೇಕು, ರೇಶನನ್ನು ವಸ್ತು ರೂಪದಲ್ಲೇ ನೀಡಬೇಕು, ಗುಂಡ್ಯ ಯೋಜನೆ ಜಾರಿಗೊಳಿಸಿ ಜಿಲ್ಲೆಯಲ್ಲಿ ಸುಭದ್ರ ನೀರಾವರಿ ವ್ಯವಸ್ಥೆ ತರಬೇಕು, ತುಳು ನಾಡಿನ ರೈತರ ಗ್ರಾಮೀಣ ಕ್ರೀಡೆಯಾದ ಕಂಬಳ ನಿಷೇಧವನ್ನು ಹಿಂಪಡೆಯಬೇಕು, ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆ ನಡೆಸಲು ವರ್ಷಕ್ಕೊಮ್ಮೆ ಪ್ರತ್ಯೇಕ ಗ್ರಾಮ ಸಭೆ ನಡೆಸಬೇಕು, ಪ್ರತಿ ರೈತ, ಕೃಷಿಕೂಲಿಕಾರ, ಆದಿವಾಸಿ ಕುಟುಂಬಕ್ಕೂ ಕನಿಷ್ಟ 5 ಎಕ್ರೆ ಭೂಮಿ ಹಂಚಿಕೆಯಾಗುವಂತೆ ಸಮಗ್ರ ಭೂಹಂಚಿಕೆ ಮಸೂದೆ ಜಾರಿಯಾಗಬೇಕು” ಎಂದು ಆಗ್ರಹಿಸಿದರು.