ಆಮದು ಅಡಿಕೆ ತೆರಿಗೆ ಏರಿಕೆ : ಕೃಷಿಕರು ಖುಷ್

ಮಂಗಳೂರು : ಕೇಂದ್ರದ ವಾಣಿಜ್ಯ ಮತ್ತು ವಿದೇಶಿ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕರು ಅಡಿಕೆ ಆಮದಿನ ಮೇಲೆ ಕನಿಷ್ಠ ಪ್ರಮಾಣದ ದರವನ್ನು ಏರಿಕೆ ಮಾಡಿ ಹೊರಡಿಸಿರುವ ಅಧಿಸೂಚನೆಯನ್ನು ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಸ್ವಾಗತಿಸಿದೆ. ಪ್ರಸ್ತುತ ಆಮದು ದರವನ್ನು ಪ್ರತೀ ಕೇಜಿಗೆ ರೂ 251ಕ್ಕೆ ಏರಿಕೆ ಮಾಡಲಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಆಮದು ಅಡಿಕೆ ಬೆಳೆಗಾರರನ್ನು ಇನ್ನಿಲ್ಲದಂತೆ ಕಂಗೆಡಿಸಿತ್ತು. ಅಲ್ಲದೆ ಧಾರಣೆ ಕುಸಿಯಲೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಕರಾವಳಿ ಭಾಗದ ಅಡಿಕೆ ಬೆಳೆಗಾರರು ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಹೀಗಾಗಿ ಕೇಂದ್ರ ವಾಣಿಜ್ಯ ಮತ್ತು ವಿದೇಶಿ ವ್ಯಾಪಾರ ಸಂಸ್ಥೆಯ ಜೊತೆಗೆ ಚರ್ಚೆ ನಡೆಸಿದ ಸಚಿವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಸಚಿವೆಯ ಶಿಫಾರಸ್ಸಿನ ಮೇಲೆ ಅಡಿಕೆ ಆಮದಿನ ಮೇಲೆ ಕನಿಷ್ಠ ಪ್ರಮಾಣದಲ್ಲಿ ಮಾಡಿರುವ ಏರಿಕೆಯಿಂದಾಗಿ ಅಡಿಕೆ ಬೆಳೆಗಾರರು ಕೊಂಚ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹೇಳಿದ್ದಾರೆ. ಅಡಿಕೆ ಆಮದಿನ ಮೇಲೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಇನ್ಮುಂದೆ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲಿದೆ ಎಂದಿರುವ ಸತೀಶ್ಚಂದ್ರ ಸಚಿವೆಗೆ ಅಭಿನಂದನೆ ಸಲ್ಲಿಸಿದ್ದಾರೆ.