ಹಳ್ಳಿಗಳಿಗೆ ನರ್ಮ್ ಬಸ್ ಬಿಡಲು ರೈತರ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನರ್ಮ್ ಬಸ್ ಸಾರಿಗೆ ಸೇವೆಯನ್ನು ಜಿಲ್ಲೆಯ ಹಳ್ಳಿಗಳಿಗೂ ವಿಸ್ತರಿಸಬೇಕೆಂದು ಉಡುಪಿ ಜಿಲ್ಲಾ ಕೃಷಿಕ ಸಂಘವು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜರನ್ನು ಆಗ್ರಹಿಸಿದೆ.

ನರ್ಮ್ ಬಸ್ ಸೇವೆ ಆರಂಭದಿಂದ ಕೃಷಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಒಳ್ಳೆಯದಾಗಿದೆ. ಪ್ರಸ್ತುತ ಈ ಬಸ್ಸುಗಳು ಈಗಾಗಲೆ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳು ಸಂಚರಿಸುತ್ತಿರುವ ಪ್ರದೇಶಗಳಿಗೇ ಸಂಚರಿಸುತ್ತಿರುವುದರಿಂದ ಹೆಚ್ಚಿನ ಜನರಿಗೆ ಮತ್ತು ಸರಕಾರಕ್ಕೂ ಹೆಚ್ಚು ಉಪಯೋಗಕಾರಿಯಾಗಿ ಕಾಣುತ್ತಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು, ಜತೆಗೆ ಖಾಸಗಿ ಬಸ್ಸಿನವರ ಆಕ್ಷೇಪಗಳನ್ನು ಮುಂದಿಟ್ಟು ಉಡುಪಿ ಜಿಲ್ಲೆಯಲ್ಲಿ ನರ್ಮ್ ಬಸ್ ಸಂಚಾರ ಸ್ಥಗಿತವಾಗುವ ಲಕ್ಷಣಗಳಿವೆ. ಆದ್ದರಿಂದ ನರ್ಮ್ ಬಸ್ಸುಗಳ ಸಂಚಾರವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಂತೆ ಕೃಷಿಕ ಸಂಘವು ಉಸ್ತುವಾರಿ ಸಚಿವರನ್ನು ಒತ್ತಾಯಿಸಿದೆ.

ನರ್ಮ್ ಬಸ್ಸುಗಳನ್ನು ಈಗಿರುವ ರೂಟುಗಳಲ್ಲೇ ಮುಂದಕ್ಕೆ ಗ್ರಾಮಾಂತರ ಪ್ರದೇಶಗಳಿಗೆ ಮತ್ತು ವಿರಳ ಖಾಸಗಿ ಬಸ್ ಸಂಚಾರವಿರುವ ಪ್ರದೇಶಗಳಿಗೆ ಕೃಷಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರ ಆದ್ಯತೆಯ ಮೇರೆಗೆ ವಿಸ್ತರಿಸಿದರೆ ಜನತೆಗೆ ಅನುಕೂಲವಾಗುವುದಲ್ಲದೆ ಸರಕಾರಕ್ಕೂ ಲಾಭಕರವಾಗಲಿದೆ. ಜನರ ಅಹವಾಲುಗಳ ಆದ್ಯತೆಗಳನ್ನು ಪರಿಗಣಿಸಿ ಪಟ್ಟಿ ಮಾಡಿ ವಿದ್ಯಾರ್ಥಿಗಳು, ಕೃಷಿಕರು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನರ್ಮ್ ಬಸ್ ಸಂಚಾರ ವೇಳಾಪಟ್ಟಿ ನಿಗದಿಗೊಳಿಸಲು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆಯೂ ಪ್ರಮೋದ್ ಮಧ್ವರಾಜರನ್ನು ಕೃಷಿಕ ಸಂಘ ಒತ್ತಾಯಿಸಿದೆ.