ಹಾಸನ : ರೈತ ಮುಖಂಡರು – ಜೆಡಿಎಸ್ಸಿಗರ ಮಧ್ಯೆ ಜಟಾಪಟಿ

ಹಾಸನ : ಬೇಲೂರಿಗೆ ಹತ್ತಿರದ ರಣಘಟ್ಟ ಕಿಂಡಿ ಅಣೆಕಟ್ಟಿಗೆ ಶನಿವಾರ ಮಾಜಿ ಪ್ರಧಾನಿ ದೇವೇಗೌಡ ಭೇಟಿ ನೀಡಿದ ವೇಳೆ ರೈತ ಸಂಘದ ಮುಖಂಡರು ಮತ್ತು ಜೆಡಿಎಸ್ ನಾಯಕರ ಮಧ್ಯೆ ತೀವ್ರ ಕಿತ್ತಾಟ ನಡೆಯಿತು.

ಗೌಡರು ಬೇಲೂರು ತಾಲೂಕಿನ ಜನರನ್ನು ನಿರ್ಲಕ್ಷ್ಯಿಸಿದ್ದಾರೆಂದು ರೈತರು ಆರೋಪಿಸಿದಾಗ, ಪ್ರಧಾನಿ ಬಳಗದಲ್ಲಿದ್ದ ಜೆಡಿಎಸ್ ಮುಖಂಡರು ಮತ್ತು ರೈತ ಮುಖಂಡರ ಮಧ್ಯೆ ಭಿನ್ನಾಮತ ಸ್ಫೋಟಗೊಂಡು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ರೈತರು ಮತ್ತು ಸಂತರು ಇತ್ತೀಚೆಗೆ ಹಳೆಬೀಡು, ಮಡಿಹಳ್ಳಿ ಮತ್ತು ಜಾವಗಲ್ ಹೋಬಳಿಯ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಪ್ರಾಜೆಕ್ಟೊಂದಕ್ಕಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ದೇವೇಗೌಡರು ಪರಿಸರಕ್ಕೆ ಭೇಟಿ ನೀಡಿದ್ದ ವೇಳೆ ರೈತರು ಮತ್ತು ಜೆಡಿಎಸ್ ಮುಖಂಡರ ಮಧ್ಯೆ ಕಾವೇರಿದ ವಾತಾವರಣ ಸೃಷ್ಟಿಯಾಗಿತು.

ಇಲ್ಲಿಗೆ ನೀರಾವರಿ ಪ್ರಾಜೆಕ್ಟ್ ಮಂಜೂರು ಮಾಡಿಸಲು ದೇವೇಗೌಡರಿಗೆ ಕಷ್ಟವೇನಾಗದು. ಆದರೆ ಅವರು ಈ ಭಾಗದ ರೈತರನ್ನು ಸಂಪೂರ್ಣ ನಿರ್ಲಕ್ಷ್ಯಿಸಿದ್ದಾರೆ ಎಂದು ಟೀಕಿಸಿದ ರೈತ ಸಂಘದ ಮುಖಂಡ ಕೆ ಪಿ ಕುಮಾರ್, “ನಮ್ಮ ತಾಲೂಕು ಒಳಗೊಂಡಿರುವ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ದೇವೇಗೌಡರು ಈ ಭಾಗವನ್ನು ಸಂಪೂರ್ಣ ಮರೆತ್ತಿದ್ದಾರೆ” ಎಂದರು.

ಸ್ಥಳದಲ್ಲಿದ್ದ ರೈತ ಮುಖಂಡರು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದಾಗ ಕುಪಿತಗೊಂಡ ಜೆಡಿಎಸ್ಸಿಗರು ಪ್ರತಿಯಾಗಿ ಮಾತಿಗಿಳಿದರು. ಆಗ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಆ ಹೊತ್ತಿಗೆ ದೇವೇಗೌಡರು ಸ್ಥಳದಿಂದ ತೆರಳಿದ್ದರೂ, ಎರಡೂ ಬಣಗಳ ಮುಖಂಡರು ಕಿತ್ತಾಟ ಮುಂದುವರಿದಿತ್ತು. ಪೊಲೀಸರು ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಿದರು.

ದಾರಿಮಧ್ಯೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, “ರಣಘಟ್ಟ ಕಿಂಡಿ ಅಣೆಕಟ್ಟು ದುರಸ್ತಿಗೆ ಪ್ರಯತ್ನಿಸಿ, ರೈತರಿಗೆ ಅದರ ಲಾಭ ಪಡೆಯುವಂತೆ ಮಾಡುವೆ” ಎಂದರು.