ಮೇಯುತ್ತಿದ್ದ ದನ ಗದ್ದೆಗೆ ನುಗ್ಗಿತೆಂದು ಬಾಲಕನಿಗೆ ಹೊಡೆದು ಕೊಂದ ರೈತ

ಸಾಂದರ್ಭಿಕ ಚಿತ್ರ

ಪಾಟ್ನಾ : ಬಿಹಾರದ ಕಟಿಹಾರ್ ಜಿಲ್ಲೆಯ ಸಿಸಿಯಾ ಎಂಬ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ದನವೊಂದು ಪ್ರಭಾವಿ ಗ್ರಾಮಸ್ಥನೊಬ್ಬನ ಗದ್ದೆಗೆ ನುಗ್ಗಿತೆಂಬ ಒಂದೇ ಕಾರಣಕ್ಕೆ ದನ ಮೇಯಿಸುತ್ತಿದ್ದ ಹತ್ತು ವರ್ಷದ ಬಾಲಕನನ್ನು ಹೊಡೆದು ಸಾಯಿಸಲಾಗಿದೆ.

ಬಾಲಕ ಮೊಹಮ್ಮದ್ ಅಲಿ ದನವನ್ನು ಮೇಯಲು ಬಿಟ್ಟಿದ್ದಾಗ ಅದು ಒಮ್ಮೆಗೇ ಪೃಥ್ವೀಚಂದ್ ಸಿಂಗ್ ಎಂಬ ರೈತನ ಗದ್ದೆಗೆ ನುಗ್ಗಿದ ಪರಿಣಾಮ ಆತ ಬಾಲಕನನ್ನು ತರಾಟೆಗೆ ತೆಗೆದುಕೊಂಡು ನಂತರ ಸಿಟ್ಟಿನ ಭರದಲ್ಲಿ ಆತನಿಗೆ ಹೊಡೆದಿದ್ದ.

ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.

ಘಟನೆಯಿಂದ ಉದ್ರಿಕ್ತರಾದ ಬಾಲಕನ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಆತನಿಗೆ ಚೆನ್ನಾಗಿ ಥಳಿಸಿದ್ದಾರೆ. ಆತನನ್ನು ಈಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ಇಂತಹುದೇ ಇನ್ನೊಂದು ಘಟನೆಯಲ್ಲಿ ಆಡೊಂದು ಸ್ಥಳೀಯ ಭೂಮಾಲಕನ ಗದ್ದೆಗೆ ನುಗ್ಗಿದೆಯೆಂದು ಅದರ ಮಾಲಕನನ್ನು ಹೊಡೆದು ಸಾಯಿಸಲಾಗಿತ್ತು.