ಗರಿಗೆದರಿದ ಕೃಷಿ ಚಟುವಟಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಮುಂಗಾರಿನ ಸೂಕ್ತ ಸಮಯದಲ್ಲಿ ಜಿಲ್ಲೆಯಾದ್ಯಂತ ಮಳೆ ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಜಿಲ್ಲೆಯ ಕರಾವಳಿ ತಾಲೂಕು ಮತ್ತು ಘಟ್ಟದ ಮೇಲ್ಭಾಗದ ತಾಲೂಕುಗಳಲ್ಲಿ ಈಗಾಗಲೇ ವ್ಯವಸಾಯಕ್ಕೆ ಬಿತ್ತನೆ ಪ್ರಾರಂಭಿಸಲಾಗಿದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಸುರಿದಿರುವುದು ಭೂಮಿ ಹದ ಮಾಡಲು ಸಹಕಾರಿಯಾಗಿದೆ. ಹಳಿಯಾಳ ಹಾಗೂ ಮುಂಡಗೋಡ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿರುವುದು ಕಂಡುಬಂದಿದೆ. ರೈತರು ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತದ ಜೊತೆ ಮೆಕ್ಕೆಜೋಳವನ್ನು ಕೂರಿಗೆ ಪದ್ಧತಿಯಲ್ಲಿ ಮಾಡಲು ಆರಂಭಿಸಿದ್ದು ಜೂನ್ ತಿಂಗಳಲ್ಲಿ ಸಸಿಗಳು ಸಿದ್ಧಗೊಳ್ಳಲಿವೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅವುಗಳನ್ನು ನಾಟಿ ಮಾಡುವ ಕಾರ್ಯ ನಡೆಯಲಿದೆ.

ಭತ್ತ ಬಿತ್ತನೆ ಬೀಜಕ್ಕೆ 10,820 ಕ್ವಿಂಟಲ್ ಬೇಡಿಕೆಯಿದ್ದು, 4,281 ಕ್ವಿಂಟಲ್ ಪೂರೈಕೆಯಾಗಿದೆ. ಇದರಲ್ಲಿ 2,096 ಕ್ವಿಂಟಲ್ ವಿತರಣೆ ಮಾಡಲಾಗಿದ್ದು, 2,184 ಕ್ವಿಂಟಲ್ ಬೀಜ ದಾಸ್ತಾನಿದೆ. ಮೆಕ್ಕೆಜೋಳ ಬೀಜ 1,275 ಕ್ವಿಂಟಲ್ ಬೇಡಿಕೆಯಿದ್ದು, 1,586 ಕ್ವಿಂಟಲ್ ಪೂರೈಕೆಯಾಗಿದೆ. ಇದರಲ್ಲಿ 1,004 ಕ್ವಿಂಟಲ್ ವಿತರಣೆಯಾಗಿದ್ದು, 581 ಕ್ವಿಂಟಲ್ ಉಳಿದಿದೆ. ಸುಮಾರು 8,000 ಫಲಾನುಭವಿಗಳು ಬಿತ್ತನೆ ಬೀಜವನ್ನು ಪಡೆದಿದ್ದಾರೆ. ಹೆಚ್ಚುವರಿ ಇಳುವರಿ ಪಡೆಯಬಹುದಾದ ಹೈಬ್ರಿಡ್ ಭತ್ತ ಬಿತ್ತನೆಗೆ ಕೃಷಿ ಇಲಾಖೆ ಈ ಬಾರಿ ಹೆಚ್ಚಿನ ಒತ್ತು ನೀಡಿದೆ. ಅಂಕೋಲಾ, ಭಟ್ಕಳ, ಶಿರಸಿ, ಸಿದ್ದಾಪುರ, ಕುಮಟಾ ತಾಲೂಕುಗಳಲ್ಲಿ ಒಟ್ಟು 80 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 55 ಕ್ವಿಂಟಲ್ ಪೂರೈಕೆಯಾಗಿದೆ. ಇದರಲ್ಲಿ 4.50 ಕ್ವಿಂಟಲ್ ಬೀಜವನ್ನು 40 ಫಲಾನುಭವಿಗಳು ಪಡೆದಿದ್ದು, 49.50 ಕ್ವಿಂಟಲ್ ಬೀಜ ದಾಸ್ತಾನಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಯುತ್ತಿರುವುದರಿಂದ ಈ ವರ್ಷ ನೀರಿನ ಸದ್ಬಳಕೆ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಕೃಷಿ ಇಲಾಖೆ ಮಾಡುತ್ತಿದೆ. ವಿಫಲ ಕೊಳವೆಬಾವಿ ಮುಚ್ಚುವುದು, ಹಸಿರೆಲೆ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಹಾಗೂ ಕೃಷಿ ಭಾಗ್ಯ ಯೋಜನೆಯ ಲಾಭದ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯದಿಂದ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.