ಕೆಎಸ್ಸಾರ್ಟಿಸಿ ಇಂಟರ್ ಸಿಟಿ ಎಕ್ಸ್ಪ್ರೆಸ್ ಸರ್ವೀಸ್ ಬಸ್ಸುಗಳಲ್ಲಿ ದರ ಕಡಿತ

ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯು ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಇದೀಗ ಪ್ರಯಾಣ ದರವನ್ನು ಪರಿಷ್ಕøರಿಸಿದ್ದು, ನೂತನ ಕಡಿತಗೊಳಿಸಿದ ಪರಿಷ್ಕøತ ದರಗಳು ಡಿ 10ರ ಬಳಿಕ ಜಾರಿಗೆ ಬರಲಿದೆ. ಆದರೆ ಇಂಟರ್ ಸಿಟಿ ಎಕ್ಸ್‍ಪ್ರೆಸ್ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾತ್ರ ಈ ಪ್ರಯಾಣದರ ಅನ್ವಯವಾಗಲಿದೆ.

ತಿಂಗಳ ಪಾಸ್ ಸೌಲಭ್ಯವನ್ನು ಹೊಂದಿರುವ ಪ್ರಯಾಣಿಕರು ಈ ನೂತನ ವ್ಯವಸ್ಥೆಯ ಲಾಭವನ್ನು ಇಂದಿನಿಂದಲೇ ಪಡೆದುಕೊಳ್ಳಲಿದ್ದಾರೆ.

ಆದರೆ ಸಾಮಾನ್ಯ ಸಂಚಾರಿ ಬಸ್ಸುಗಳಿಗೆ ಈ ಪ್ರಯಾಣ ದರವನ್ನು ಅನ್ವಯಿಸುವಂತಿಲ್ಲ. ಇದಲ್ಲದೇ ಎಕ್ಸ್‍ಪ್ರೆಸ್ ಸರ್ವೀಸ್ ಬಸ್ಸುಗಳಲ್ಲಿ ಕೂಡಾ 20 ಕಿ ಮೀ ದೂರ ಸಂಚರಿಸುವ ಪ್ರಯಾಣಿಕರಿಗೆ ಇದು ಅನ್ವಯವಾಗುವುದಿಲ್ಲ. ಅಂದರೆ ಮೊದಲ ಮೂರು ಸ್ಟೇಜುಗಳಿಗೆ ಈ ಪರಿಷ್ಕøತ ದರ ಅನ್ವಯವಾಗುವುದಿಲ್ಲ. ಕನಿಷ್ಠ 100 ರೂ. ಪ್ರಯಾಣಕ್ಕಿಂತ ಹೆಚ್ಚು ದರ ತೆತ್ತು ಪ್ರಯಾಣಿಸುವವರು ಮಾತ್ರ ಈ ನೂತನ ವ್ಯವಸ್ಥೆಯಡಿ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಕಳೆದ ವರ್ಷ ಏಕಾಏಕಿ ಏರಿಸಿದ ಪ್ರಯಾಣದರದಿಂದ ಕಂಗಾಲಾಗಿರುವ ಪ್ರಯಾಣಿಕರ ನೋವನ್ನು ಕಂಡು ಸಂಸ್ಥೆಯ ಅಧಿಕಾರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲೂ ತಿಂಗಳ ಪಾಸ್ ಸೌಲಭ್ಯವನ್ನು ಪಡೆದುಕೊಂಡಿರುವ ಬಿ ಸಿ ರೋಡು, ಧರ್ಮಸ್ಥಳ, ಬೆಳ್ತಂಗಡಿ, ಪುತ್ತೂರು ಮತ್ತು ವಿಟ್ಲ ನಡುವೆ ಸಂಚರಿಸುವ ಪ್ರಯಾಣಿಕರು ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಪ್ರಯಾಣಿಕರು ಕೂಡಲೇ ತಮ್ಮ ಪಾಸ್ ನವೀಕರಿಸಿಕೊಳ್ಳಲು ಇಲಾಖೆ ಸೂಚಿಸಿದೆ.