ಸತ್ತ ಬಾಲಕಿ ಮತ್ತೆ ಜೀವಂತಳಾಗುತ್ತಾಳೆ ಎಂದು ಅಂತ್ಯಕ್ರಿಯೆ ನಡೆಸದೆ ಪೂಜೆ

ಭುವನೇಶ್ವರ್ : ಸಿಡುಬು ರೋಗದಿಂದ ಮೃತಪಟ್ಟ 10 ವರ್ಷದ ಬಾಲಕಿಯೊಬ್ಬಳು ಮತ್ತೆ  ಜೀವಂತಳಾಗಬಲ್ಲಳು ಎಂಬ ಮೂಢನಂಬಿಕೆಯಿಂದ ಆಕೆಯ ಅಂತ್ಯಕ್ರಿಯೆ ನಡೆಸದೆ ಕುಟುಂಬವೊಂದು ಪೂಜೆ ನಡೆಸುತ್ತಿರುವ ವಿಚಿತ್ರ ಘಟನೆಯೊಂದು ಒಡಿಶಾದ ಬೌಧ್ ಜಿಲ್ಲೆಯ ಹರಭಂಗಾ ಬ್ಲಾಕಿನಲ್ಲಿರುವ ಸನಬಂಕಪದ ಗ್ರಾಮದಿಂದ ವರದಿಯಾಗಿದೆ.

ಸಿಡುಬು ರೋಗ ಬಂದವರ ಮೈಯ್ಯಲ್ಲಿ  ದೇವಿಯ ಆವಾಹನೆಯಾಗುತ್ತದೆಯೆಂಬ ನಂಬಿಕೆಯಿರುವುದರಿಂದ ಕುಟುಂಬ ಸದಸ್ಯರು ಬಾಲಕಿಯ ದೇಹವನ್ನು ಮಹಾನದಿ  ತೀರದಲ್ಲಿರುವ ಬಂಡೆಗಳೆಡೆಯಲ್ಲಿ ಕಹಿಬೇವಿನ ಎಲೆಗಳಿಂದ ಮುಚ್ಚಿದ್ದರು. ಏಳು ದಿನಗಳ ನಂತರವೂ ಬಾಲಕಿಯ ದೇಹ ಕೊಳೆತಿಲ್ಲ ಎಂದು ಕಂಡುಕೊಂಡ ಕುಟುಂಬ ಸದಸ್ಯರು ಫುಲ್ಬನಿ ಮೂಲದ ತಾಂತ್ರಿಕನ ಸಹಾಯ ಪಡೆದು ಬಾಲಕಿಯ ದೇಹಕ್ಕೆ ಪವಿತ್ರ ನೀರು ಚಿಮುಕಿಸಿದ್ದರು. ಬಾಲಕಿಯ ದೇಹಕ್ಕೆ ಮತ್ತೆ ಜೀವ ಬರುವ ಸಲುವಾಗಿ ಮಾಂತ್ರಿಕ ಫುಲ್ಬನಿ ದೇವಳದಲ್ಲಿ ಅಖಂಡ ದೀಪಂ (ಆರದ ದೀಪ) ಹೊತ್ತಿಸಿದ್ದಾನೆ. ತರುವಾಯ ಬಾಲಕಿಯ ಹೆತ್ತವರು ಆಕೆಯ ದೇಹದ ಬಳಿ ಪೂಜೆ ಮಾಡುತ್ತಿದ್ದು ಆಕೆಗೆ ಮತ್ತೆ ಜೀವ ಬರುವುದೆಂಬ ಆಶಾವಾದದಲ್ಲಿದ್ದಾರೆ.