ಕುಟುಂಬ ಇದ್ದ ಕಾರು ತಡೆದು ನಿಲ್ಲಿಸಿ ಮುಖವಾಡ ಧರಿಸಿದವರಿಂದ ಹಲ್ಲೆ

ಕಾಸರಗೋಡು : ಕುಟುಂಬ ಸಂಚರಿಸುತಿದ್ದ ಕಾರೊಂದನ್ನು ತಡೆದು ನಿಲ್ಲಿಸಿದ ಮುಖವಾಡ ಧರಿಸಿದ್ದ ತಂಡ ದಂಪತಿ ಹಾಗು ಪುತ್ರನನ್ನು ಹಲ್ಲೆಗೈದು ಗಾಯಗೊಳಿಸಿದೆ. ಕುತ್ತಿಕ್ಕೋಲನಲ್ಲಿ ಈ ಘಟನೆ ನಡೆದಿದೆ.

ಹಲ್ಲೆಯಿಂದ ಗಂಭೀರ ಗಾಯಗೊಂಡ ಕುತ್ತಿಕ್ಕೋಲ್ ನಿವಾಸಿ ಕೆ ಅಬ್ದುಲ್ ನಾಸರ್ (56) ಪತ್ನಿ ಖೈರುನ್ನಿಸಾ (40) ಹಾಗು ಪುತ್ರ ಇರ್ಷಾದ್ (8) ಎಂಬವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕುತ್ತಿಕ್ಕೋಲ್ ಪೇಟೆಗೆ ತೆರಳಿದ ಕುಟುಂಬ ಕಾರಿನಲ್ಲಿ ಮನೆಗೆ ಮರಳುತಿದ್ದಾಗ ಮುಖವಾಡ ಧರಿಸಿದ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಮನೆ ಪರಿಸರದ ಆರಾಧನಾಲಯವೊಂದರ ಸಮೀಪ ತಲುಪಿದಾಗ ಹಲ್ಲೆ ನಡೆದಿದೆ. ರಸ್ತೆಗೆ ತಡೆ ಸೃಷ್ಟಿಸಿದ ತಂಡ ಕಾರನ್ನು ತಡೆದು ಬಳಿಕ ಅಬ್ದುಲ್ ನಾಸರನ್ನು ಕಾರಿನಿಂದ ಹೊರಗೆ ಎಳೆದು ಮಾರಕಾಯುಧಗಳಿಂದ ಗಂಭೀರ ಗಾಯಗೊಳಿಸಿದ್ದಾರೆ. ಪತ್ನಿ ಖೈರುನ್ನಿಸಾ ಕಾರಿನಿಂದಿಳಿದು ರಸ್ತೆ ತಡೆಯನ್ನು ತೆರವುಗೊಳಿಸುತಿದ್ದ ವೇಳೆ ಮಧ್ಯೆ ಅವಿತು ನಿಂತಿದ್ದ ಇಬ್ಬರು ಮುಸುಕುದಾರಿಗಳು ಓಡಿ ಬಂದು ಖೈರುನ್ನಿಸಾರಿಗೆ ಹಲ್ಲೆಗೈದಿದ್ದಾರೆ. ಬಳಿಕ ತಂಡ ಪರಾರಿಯಾಗಿದೆ. ಕೊಲ್ಲಿಯಲ್ಲಿ ಉದ್ಯೋಗಿ ಯಾಗಿರುವ ನಾಸರ್ ನಾಲ್ಕು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಈ ಹಿಂದೆ ಹಲವು ಬಾರಿ ಬೆದರಿಕೆ ಕರೆಗಳು ಬಂದಿತ್ತೆಂದು ದೂರಿನಲ್ಲಿ ಹೇಳಲಾಗಿದೆ.