ಅಭಿಯಾನದಲ್ಲಿ ಫಳ್ನೀರ್, ಅತ್ತಾವರ ಸೇರಿದಂತೆ ಹಲವು ಪ್ರದೇಶಗಳು ಸ್ವಚ್ಚ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಮಕೃಷ್ಣ ಮಿಷನ್ ಮುಂದಾಳತ್ವದಲ್ಲಿ ರವಿವಾರ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 400 ಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿ ಫಳ್ನೀರ್, ಅತ್ತಾವರ ಸೇರಿದಂತೆ ಹಲವು ಪ್ರದೇಶಗಳನ್ನು ಸ್ವಚ್ಛಗೊಳಿಸಿದರು.

ಸ್ವಚ್ಚ ಮಂಗಳೂರು ಸ್ವಯಂ ಸೇವಕರು ಅನಗತ್ಯ ಸ್ಥಳಗಳಲ್ಲಿ ಅಳವಡಿಸಲಾಗಿರುವ ರಸ್ತೆ ತಡೆಗಳನ್ನು ತೆಗೆದು ಅಲ್ಲಿ ತುಂಬಿದ್ದ ಕೊಳಕು ಮತ್ತು ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು. ಹಳೆ ಬ್ಯಾರಿಕೇಡುಗಳು ಹೆಚ್ಚು ಸ್ಥಳವನ್ನು ಆಕ್ರಮಿಸಿದ್ದರಿಂದ ವಾಹನ ಸಂಚಾರಕ್ಕೆ ಸ್ಥಳದ ಸಮಸ್ಯೆ ಎದುರಾಗಿತ್ತು. ಈ ಎಲ್ಲಾ ತಡೆಗಳನ್ನು ತೆಗೆದು ವಾಹನಿಗರಿಗೆ ನೆರವಾಗಲೆಂದು ಪ್ರತಿಫಲಕಗಳನ್ನು ಹೊಂದಿರುವ ಕಬ್ಬಿಣದ ಸರಳುಗಳನ್ನು ಅಳವಡಿಸಿದರು.

ಫಳ್ನೀರು ಪ್ರದೇಶದ ಬಸ್ ನಿಲ್ದಾಣ ತ್ಯಾಜ್ಯಗಳಿಂದ ತುಂಬಿ ಹೋಗಿತ್ತು. ಬಸ್ ನಿಲ್ದಾಣವನ್ನು ಬಳಸಲು ಜನರು ಅಸಹ್ಯಪಡುತ್ತಿದ್ದರು. ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಲ್ಲದೆ, ಹೊಸ ಬಣ್ಣ ಬಳಿದು ಚಂದಗೊಳಿಸಿದರು. ಬಸ್ ನಿಲ್ದಾಣದ ಮುಂದೆ ತುಂಬಿದ್ದ ಮಣ್ಣು ಮತ್ತು ತ್ಯಾಜ್ಯವನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸಿದರು.

ಮಂಗಳೂರು ಲೇಡೀಸ್ ಬ್ಯೂಟಿ ಎಸೋಸಿಯೇಷನ್ನಿನ ಸದಸ್ಯರು ರಸ್ತೆಯ ಎಡಬದಿಯನ್ನು ಸ್ವಚ್ಛಗೊಳಿಸಿ, ಮಿಲಾಗ್ರಿಸ್.ವರೆಗೆ ಪ್ರತಿ ನಿಲ್ದಾಣಕ್ಕೆ ಹೊಂದಿಕೊಂಡಿರುವ ಡ್ರೈನನ್ನು ಸ್ವಚ್ಛಗೊಳಿಸಿದರು. ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಂಬೇಡ್ಕರ್ ವೃತ್ತದತ್ತ ಚಲಿಸುವ ಎ ಎಸ್ ಕೊಹಿಲೊ ರಸ್ತೆಯನ್ನು ಸ್ವಚ್ಛಗೊಳಿಸಿದರು.

ಸೈಂಟ್ ಅಲೋಷಿಯಸ್ಸಿನ ಎನ್ನೆಸ್ಸೆಸ್ ಸ್ವಯಂ ಸೇವಕರು ಡಾನ್ ಬಾಸ್ಕೋ ರಸ್ತೆಯನ್ನು ಸ್ವಚ್ಛಗೊಳಿಸಿ ರಸ್ತೆ ಬದಿಗಳಲ್ಲಿ ಬೆಳೆದು ನಿಂತಿದ್ದ ಕಳೆ ಮತ್ತು ಕುರುಚಲು ಹುಲ್ಲುಗಳನ್ನು ತೆರವುಗೊಳಿಸಿದರು. ಎಕ್ಕೂರು ನಾಗರಿಕರು ಮತ್ತು ಅಯ್ಯಪ್ಪ ಭಜನಾ ಮಂದಿರ ಸದಸ್ಯರು ಅತ್ತಾವರವರೆಗಿನ ಜಂಕ್ಷನ್ ಸ್ವಚ್ಚಗೊಳಿಸಿದರು. ಸೈಂಟ್ ಅಲೋಷಿಯಸ್ ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿಗಳು ಅವೆರಿಯಿಂದ ಮಿಲಾಗ್ರಿಸ್.ವರೆಗಿನ ಜಂಕ್ಷನ್ ಸ್ವಚ್ಛಗೊಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೈಲ್ಯಾಂಡಿನತ್ತ ಚಲಿಸುವ ಕಾರ್ ಸ್ಟ್ರೀಟ್ ರಸ್ತೆ ಸ್ವಚ್ಛಗೊಳಿಸಿದರು. ಸೈಂಟ್ ಅಲೋಷಿಯಸ್ ಕಾಲೇಜು ವಿದ್ಯಾರ್ಥಿಗಳು ಫಳ್ನೀರ್ ಪ್ರದೇಶದ ಹಲವಾರು ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ಈ ಕುರಿತಾದ ಕರಪತ್ರ ಹಂಚಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಈ ಅಭಿಯಾನಕ್ಕೆ ಎಂ ಆರ್ ಪಿ ಎಲ್ ಪ್ರಾಯೋಜಕತ್ವ ನೀಡಿದೆ.

 

LEAVE A REPLY