ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ : ದೂರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿ ನಂತೂರುಪದವು ನಿವಾಸಿ ವಿನಾಯಕ್ ಎಂಬವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಯಾಂಕಿನಲ್ಲಿ ಉದ್ಯೋಗಾವಕಾಶ ಮಾಡಿಕೊಡಲಾಗುವುದು ಎಂದು ದಿನ ಪತ್ರಿಕೆಯಲ್ಲಿ ಬಂದ ಜಾಹೀರಾತಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ತನ್ನನ್ನು ಕಚೇರಿಗೆ ಬರಲು ಹೇಳಿದ್ದು, ನನಗೆ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು.

ಬಳಿಕ ಬೆಂಗಳೂರಿನ ಕಚೇರಿಗೆ ತೆರಳಿ ಅಲ್ಲಿ ಸಂದರ್ಶನ ಎದುರಿಸುವಂತೆ ಸೂಚಿಸಿದ್ದರು. ಅದರಂತೆ ನಾನು ಸಂದರ್ಶನಕ್ಕೆ ಬೆಂಗಳೂರಿಗೆ ತೆರಳಿದಾಗ ನನ್ನ ಸಂದರ್ಶನ ನಡೆಸಿ 1500 ರೂ ನನ್ನಿಂದ ಪಡೆದುಕೊಂಡಿದ್ದರು. ನಿಮ್ಮ ಮನೆ ವಿಳಾಸಕ್ಕೆ ನೀವು ಬ್ಯಾಂಕಿನ ಕೆಲಸಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಅಪಾಯಿಂಟ್ಮೆಂಟ್ ಲೆಟರ್ ಕಳುಹಿಸಲಾಗುವುದು ಎಂದು ನನ್ನನ್ನು ಕಳುಹಿಸಿಕೊಟ್ಟಿದ್ದರು.

ಆದರೆ ಇದೀಗ ನನಗೆ ಉದ್ಯೋಗ ನೀಡದೇ ವಂಚಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿನಾಯಕ್ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.