ಅಹ್ಮದಾಬಾದಿನ ಬಂಗಲೆಯಿಂದ ನಕಲಿ ನೋಟು ಯಂತ್ರ ವಶ

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್ : ನಗರದ ಬೊಪಾಲ್ ಪ್ರದೇಶದ ಬಂಗಲೆಯೊಂದಕ್ಕೆ ಬುಧವಾರ ದಾಳಿ ನಡೆಸಿರುವ ರಾಜಕೋಟ್ ಕ್ರೈಂ ಬ್ರ್ಯಾಂಚಿನ ಪೊಲೀಸರು ನಕಲಿ ನೋಟು ಮುದ್ರಿಸುವ ಯಂತ್ರವೊಂದನ್ನು ಹಾಗೂ ನೋಟು ಮುದ್ರಿಸಲು ಬಳಸಲಾಗುತ್ತಿದ್ದ ಖಾಲಿ ಹಾಳೆಗಳನ್ನು ವಶಪಡಿಸಿಕೊಂಡಿದ್ದಾರೆ. ತರುವಾಯ ರೂ 12.45 ಲಕ್ಷ ಮೌಲ್ಯದ ಹೊಸ ರೂ 2000 ನೋಟುಗಳನ್ನು ಖೇಡಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದು ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

ಹನುಮಾನ್ ಮಧಿ ಸಮೀಪ  ಇತ್ತೀಚೆಗೆ  ಹೊಸ ನೋಟುಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರಲ್ಲಿ ಒಬ್ಬ ನೀಡಿದ ಮಾಹಿತಿಯನ್ವಯ ಮೇಲಿನ ಕಾರ್ಯಾಚರಣೆ ನಡೆದಿದೆ. ಅಹ್ಮದಾಬಾದ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ನೋಟು ಜಾಲದ ವ್ಯಕ್ತಿಗಳು ಇವರಾಗಿದ್ದಾರೆಂದು ತನಿಖೆಯ ವೇಳೆ ತಿಳಿದು ಬಂದಿತ್ತು.