ಖೋಟಾನೋಟು ಹೊಂದಿದ್ದವಗೆ 5 ವರ್ಷ ಜೈಲು ಶಿಕ್ಷೆ, ದಂಡ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಖೋಟಾ ನೋಟು ಹೊಂದಿದ್ದ ವ್ಯಕ್ತಿಯೊಬ್ಬಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಜೊತೆಗೆ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ವಿಟ್ಲ ಸಮೀಪದ ಕುಳ ಗ್ರಾಮದ ಅರಿಪ್ಪುಕಟ್ಟ ನಿವಾಸಿ ಅಬ್ದುಲ್ ಖಾದರ್ (62) ಶಿಕ್ಷೆಗೊಳಗಾಗಿರುವ ಅಪರಾಧಿ. 2002ರ ಫೆ 6ರಂದು ನಗರದ ರೈಲ್ವೇ ರಸ್ತೆಯ ಹಂಪನಕಟ್ಟೆ ಸಮೀಪ ಬಿಳಿ ಪಾಲಿಥಿನ್ ಚೀಲದಲ್ಲಿ ವಸ್ತುವೊಂದನ್ನು ಒಯ್ಯುತ್ತಿರುವುದನ್ನು ನಗರದ ಉತ್ತರ ಪೊಲೀಸರು ಪತ್ತೆ ಮಾಡಿ ಆರೋಪಿ ಅಬ್ದುಲ್ ಖಾದರನನ್ನು ಬಂಧಿಸಿದ್ದರು.

ಬಂಧಿತನಿಂದ 100 ರೂ ಮುಖಬೆಲೆಯ 870 ನೋಟುಗಳನ್ನು ಹೊಂದಿದ್ದ 9 ಕಂತೆಗಳನ್ನು ಬಿಳಿ ಪೇಪರಿನಲ್ಲಿ ಸುತ್ತಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಇನ್ನೊಬ್ಬ ಆರೋಪಿ ಚೇರ್ಕಳದ ಸಿ ಎಚ್ ಅಮ್ಮು ಎಂಬಾತ ಹಣವನ್ನು ಪೂರೈಸಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಚೇರ್ಕಳದ ಬಿ ಬಿಂಜ ಅಮ್ಮು ಎಂಬಾತನನ್ನು ವಿಚಾರಣೆ ನಡೆಸಿ ಬಿಡಲಾಗಿತ್ತು.