ಸಚಿವರ ಆಸ್ತಿ ವಿವರ ಕೊಡಲೊಪ್ಪದ ಫಡ್ನವಿಸ್

ನವದೆಹಲಿ : ಮಹಾರಾಷ್ಟ್ರ ಸರ್ಕಾರದ ಸಚಿವರ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಆಗ್ರಹಿಸಿದರೂ ಕೊಡಲು ಒಪ್ಪದ ಮಹಾರಾಷ್ಟ್ರ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಹಿತಿ ಹಕ್ಕು ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಅಗ್ನಿಶಿಲಾ ಪತ್ರಿಕೆಯ ಸಂಪಾದಕ ಅನಿಲ್ ಗಲಗಲಿ ಈ ಕಾಯ್ದೆಯಡಿ ಕಳೆದ ಮಾರ್ಚಿನಲ್ಲಿ ಅರ್ಜಿ ಸಲ್ಲಿಸಿದ್ದು, ಅನೇಕ ಪ್ರಯತ್ನಗಳ ನಂತರ ಸರ್ಕಾರ ಸ್ಪಂದಿಸಿದೆ. ಆದರೆ ಸಚಿವರ ಆಸ್ತಿ ವಿವರಗಳನ್ನು ಆನ್ಲೈನಿನಲ್ಲಿ ನೀಡಲು ಫಡ್ನವಿಸ್ ಸರ್ಕಾರ ನಿರಾಕರಿಸಿದೆ.

ಸರ್ಕಾರದ ಆಡಳಿತ ವಿಭಾಗ ಗಲಗಲಿ ಅವರಿಗೆ ಕಳುಹಿಸಿರುವ ಮಾಹಿತಿಯಲ್ಲಿ 21 ಕ್ಯಾಬಿನೆಟ್ ಸಚಿವರು ಮತ್ತು 13 ರಾಜ್ಯಸಚಿವರ ಹೆಸರುಗಳಿದ್ದು, ಮೂವರು ಸಚಿವರ ಹೆಸರು ಕಾಣಲಾಗುತ್ತಿಲ್ಲ. ತಮ್ಮ ಸಕಲ ಆಸ್ತಿ ವಿವರಗಳನ್ನು ಸರ್ಕಾರ ಮತ್ತು ಸಾರ್ವಜನಿಕರಿಗೆ ಸಲ್ಲಿಸಬೇಕು ಎಂಬ ನಿಯಮ ಇರುವುದೇ ತಮಗೆ ತಿಳಿದಿಲ್ಲ ಎಂದು ಕೆಲವು ಸಚಿವರು ಹೇಳಿರುವುದಾಗಿ ಗಲಗಲಿ ಹೇಳಿದ್ದಾರೆ.

ಕ್ಯಾಬಿನೆಟ್ ಸಚಿವರಾದ ಏಕನಾಥ್ ಶಿಂಧೆ, ದೀಪಕ್ ಸಾವಂತ್ ಮತ್ತು ರಾಜ್ಯ ಸಚಿವರಾದ ಸಂಜಯ್ ರಾಥೋಡ್, ದಾದಾಜಿ ಭುಸೆ ಮತ್ತು ರವೀಂದ್ರ ವೈಕರ್ ತಮ್ಮ ಆಸ್ತಿವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಎಲ್ಲ ಸಚಿವರೂ ಶಿವಸೇನೆಯ ಸದಸ್ಯರಾಗಿದ್ದಾರೆ.

ಸಾರ್ವಜನಿಕ ಒತ್ತಡದ ನಂತರ ಈ ಸಚಿವರು ಆಸ್ತಿ ವಿವರ ಸಲ್ಲಿಸಬಹುದು ಎಂದು ಗಲಗಲಿ ಆಶಯ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಈ ನಿಟ್ಟಿನಲ್ಲಿ ಫಡ್ನವಿಸ್ ಸರ್ಕಾರದ ಧೋರಣೆಯ ವಿರುದ್ಧ ಜನತೆಯ ಆಕ್ರೋಶ ಸ್ಪಷ್ಟವಾಗಿದೆ. ಸಚಿವರ ಆಸ್ತಿ ವಿವರಗಳನ್ನು ಬಹಿರಂಗಪಡಿಸಲು ನಾಲ್ಕು ವರ್ಷಗಳಿಂದ ಆಂದೋಲನ ಹಮ್ಮಿಕೊಂಡಿರುವ ಗಲಗಲಿ, ಪ್ರಸಕ್ತ ಸರ್ಕಾರದ ಧೋರಣೆಯಿಂದ ಭ್ರಮನಿರಸನರಾಗಿದ್ದಾರೆ. ಹಿಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಕನಿಷ್ಠ ಸಚಿವರ ಹೆಸರುಗಳನ್ನಾದರೂ ಪ್ರಕಟಿಸಿತ್ತು, ಪ್ರಸಕ್ತ ಸರ್ಕಾರ ಯಾವುದೆ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗಲಗಲಿ ವಿಷಾದಿಸುತ್ತಾರೆ.

ಕೇಂದ್ರ ಸರ್ಕಾರ ಎಲ್ಲ ವಿವರಗಳನ್ನು ವೆಬ್ ತಾಣದಲ್ಲಿ ಪ್ರಕಟಿಸಿದೆ, ಬಿಹಾರ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಎಲ್ಲ ಸಚಿವರ ಆಸ್ತಿ ವಿವರಗಳನ್ನೂ ಪ್ರಕಟಿಸಿದ್ದಾರೆ, ಮಹಾರಾಷ್ಟ್ರ ಸರ್ಕಾರ ಮಾತ್ರ ಏಕೆ ಮಾಡಲಾಗುವುದಿಲ್ಲ ಎಂದು ಗಲಗಲಿ ಪ್ರಶ್ನಿಸುತ್ತಾರೆ. ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಈ ಧೋರಣೆ ಅಚ್ಚರಿ ಮೂಡಿಸುತ್ತದೆ ಎಂದು ಗಲಗಲಿ ಹೇಳಿದ್ದಾರೆ.