ಪ್ರಾಣ ತ್ಯಾಗಕ್ಕೆ ಅನುಮತಿ ಕೋರಿ ರಾಷ್ಟ್ರಪತಿ ಮೊರೆ ಹೋದ ದಲಿತ ದಂಪತಿ

ನವದೆಹಲಿ : ತಮ್ಮಿಬ್ಬರು ಮೊಮ್ಮಕ್ಕಳು ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ಈಜಾಡಿದರೆಂಬ ಒಂದೇ ಕಾರಣಕ್ಕೆ  ಒಡಿಶಾದ ಬ್ರಹ್ಮಗಿರಿಯ ನಿವಾಸಿಗಳಿಂದ 15 ವರ್ಷಗಳಿಂದ ಬಹಿಷ್ಕಾರಕ್ಕೊಳಗಾಗಿರುವ ಹಿರಿಯ ದಂಪತಿಯೊಂದು ಇದೀಗ ರಾಷ್ಟ್ರಪತಿಗೆ ಪತ್ರ ಬರೆದು ತಮ್ಮ ಪ್ರಾಣ ಕಳೆದುಕೊಳ್ಳಲು ಅನುಮತಿ ಕೋರಿದ್ದಾರೆ.

ಭೀಮ್ ಹಾಗೂ ತಾರಾ ಎಂಬ ಹೆಸರಿನ ಈ ದಂಪತಿ ಕಳೆದ ಹಲವು ವರ್ಷಗಳಿಂದ ಬ್ರಹ್ಮಗಿರಿ ಬ್ಲಾಕ್ ಕಚೇರಿ  ಪಕ್ಕದಲ್ಲಿರುವ ಸ್ಮಶಾನವೊಂದರ ಜಾಗದಲ್ಲಿ ಮುರುಕಲು ಮನೆಯೊಂದರಲ್ಲಿ ವಾಸವಾಗಿದ್ದಾರೆ. 2002ರ ಘಟನೆಯ ಬಳಿಕ ತಮ್ಮ ಗ್ರಾಮದ ಹೊರಗಿರುವ ಗದ್ದೆ ಪ್ರದೇಶದಲ್ಲಿ ದಂಪತಿ ನೆಲೆಯೂರಲು ಯತ್ನಿಸಿದ್ದರೂ ಅವರ ಹುಲ್ಲು ಛಾವಣಿಯ ಮನೆಗೆ ಗ್ರಾಮಸ್ಥರು ಬೆಂಕಿಯಿಕ್ಕಿ ಅಲ್ಲಿಂದ ಹೊರ ನಡೆಯುವಂತೆ ಬೆದರಿಸಿದ್ದರು. ಪ್ರಸಕ್ತ ದಂಪತಿಯ ಇಬ್ಬರು ಪುತ್ರರು  ಹಾಗೂ ಅವರ ಕುಟುಂಬ ಕೂಡ ಜೀವಭಯದಿಂದ ಬೇರೆಲ್ಲೋ ವಾಸಿಸುತ್ತಿವೆ.

ತಾವು ಇಲ್ಲಿಯ ತನಕ ಬ್ರಹ್ಮಗಿರಿ ಪೊಲೀಸ್, ಜಿಲ್ಲಾಡಳಿತ, ಒಡಿಶಾ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆÉ ದೂರಿದ್ದರೂ ಪ್ರಯೋಜನವಾಗದೇ ಇರುವ ಹಿನ್ನೆಲೆಯಲ್ಲಿ  ಆಹಾರ ಮತ್ತು ಔಷಧಿಗಾಗಿ ಹಣವಿರದೇ ಕಂಗಾಲಾಗಿರುವ ಈ ದಂಪತಿ ರಾಷ್ಟ್ರಪತಿಗೆ ಮೊರೆ ಹೋಗಿ ಪ್ರಾಣ ತ್ಯಜಿಸಲು ಅನುಮತಿ ಕೋರಿದೆ.