ಗಡಿನಾಡ ವಿದ್ಯಾರ್ಥಿಗಳ ಸೌಲಭ್ಯ ದುರುಪಯೋಗ

ಕೇರಳದ ಕಾಸರಗೋಡು ಸಹಿತ ನೆರೆರಾಜ್ಯಗಳ ಗಡಿನಾಡಿನಲ್ಲಿ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಕರ್ನಾಟಕದ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ಪರೀಕ್ಷೆ ಸಂದರ್ಭ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮಾನವಾಗಿ ಪರಿಗಣಿಸುತ್ತಿರುವುದು ಪ್ರಶಂಸನೀಯ. ಆದರೆ ಪರಭಾಷಾ ಮಾಧ್ಯಮ ಶಾಲೆಗಳಲ್ಲಿ ಕಲಿತವರು, ಕನ್ನಡ ಬಾರದ ಅಭ್ಯರ್ಥಿಗಳು ಕೂಡ ತಮ್ಮ ರಾಜ್ಯಗಳ ಅಧಿಕಾರಿಗಳಿಂದ ಕನ್ನಡ ಮಾಧ್ಯಮದಲ್ಲಿ ಕಲಿತ ಬಗ್ಗೆ ನಕಲಿ ಪ್ರಮಾಣಪತ್ರ ಹಾಜರುಪಡಿಸಿ ಈ ಸೌಲಭ್ಯ ದುರುಪಯೋಗಪಡಿಸುತ್ತಿರುವುದಾಗಿ ವ್ಯಾಪಕ ಆರೋಪಗಳು ಕೇಳಿಬರುತ್ತಿದೆ.
ಕೇರಳದಂತಹ ರಾಜ್ಯಗಳ ಎಸೆಸೆಲ್ಸಿ ಅಂಕಪಟ್ಟಿಯಲ್ಲಿ ಕಲಿಕಾ ಮಾಧ್ಯಮದ ಬಗ್ಗೆ ಉಲ್ಲೇಖವಿಲ್ಲದಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಕಲಿತ ಬಗ್ಗೆ ಅಧಿಕಾರಿಗಳು ನೀಡುವ ಸಾಂದರ್ಭಿಕ ಪ್ರಮಾಣ ಪತ್ರಗಳನ್ನೇ ನಂಬಬೇಕಾಗುತ್ತದೆ. ನಕಲಿ ಪ್ರಮಾಣಪತ್ರಗಳ ಮೂಲಕ ಅನರ್ಹರಿಗೆ ಗಡಿನಾಡ ಕನ್ನಡಿಗ ಸಲವತ್ತು ದೊರೆಯುವುದರಿಂದ ಅರ್ಹರಿಗೆ ಅನ್ಯಾಯವಾಗುತ್ತದಲ್ಲದೆ ಗಡಿನಾಡುಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲ.
ಆದುದರಿಂದ ಇನ್ನು ಮುಂದೆ ಕರ್ನಾಟಕ ಸರಕಾರ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳಿಗೆ ಸಮಾನಾವಕಾಶ ನೀಡುವಾಗ ಕನ್ನಡ ಮಾಧ್ಯಮದಲ್ಲಿ ಕಲಿತವರೆಂಬ ಅಥವಾ ಗಡಿನಾಡು ಕನ್ನಡಿಗ ಪ್ರಮಾಣಪತ್ರದ ಜತೆಗೆ ಕಡ್ಡಾಯವಾಗಿ ಪ್ರಥಮ ಭಾಷೆಯನ್ನಾಗಿ ಕನ್ನಡ ಕಲಿತವರೆಂಬುದನ್ನೂ ಪರಿಗಣಿಸಿ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಗಡಿನಾಡು ಕನ್ನಡಿಗ ಸವಲತ್ತು ನೀಡಬೇಕು.
ಎಸೆಸೆಲ್ಸಿ ಅಂಕಪಟ್ಟಿಯಲ್ಲಿ ಪ್ರಥಮ ಭಾಷೆ ಯಾವುದೆಂಬುದರ ಬಗ್ಗೆ ಸ್ಪಷ್ಟ ಹಾಗೂ ಬದಲಾಯಿಸಲಾಗದ ಉಲ್ಲೇಖವಿರುವುದರಿಂದ ನಕಲಿ ಪ್ರಮಾಣಪತ್ರಗಳ ಮೂಲಕ ಸವಲತ್ತು ದುರುಪಯೋಗಪಡಿಸುವವರನ್ನು ತಡೆಯಬಹುದು. ಆಂಗ್ಲ ಅಥವಾ ಮಲಯಾಳ ಮಾಧ್ಯಮಗಳಲ್ಲಿ ಕಲಿಯುವವರು ಕನ್ನಡವನ್ನು ಮೊದಲ ಭಾಷೆಯನ್ನಾಗಿ ಕಲಿಯಲಾಗುವುದಿಲ್ಲ ಹಾಗೂ ನಿಜವಾದ ಕನ್ನಡಾಭಿಮಾನವುಳ್ಳವರು ಕನ್ನಡ ಮಾಧ್ಯಮದಲ್ಲಿ ಕನ್ನಡವನ್ನೇ ಮೊದಲನೇ ಭಾಷೆಯನ್ನಾಗಿ ಸ್ವೀಕರಿಸಿಕೊಂಡು ಕಲಿಯುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಗಡಿನಾಡು ಕನ್ನಡ ಸವಲತ್ತು ನೀಡುವುದರಿಂದ ಗಡಿನಾಡಿನಲ್ಲಿ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಿದಂತಾಗುವುದಲ್ಲದೆ ಸವಲತ್ತುಗಳ ದುರುಪಯೋಗವನ್ನು ತಡೆಯಬಹುದು

  • ನರೇಶ್  ಮುಳ್ಳೇರಿಯಾ ಕಾಸರಗೋಡು