ಆ ಹುಡುಗಿಯ ಜೊತೆ ಫೇಸ್ಬುಕ್ ಸ್ನೇಹ ತಪ್ಪೇ?

ಪ್ರ : ನನಗೀಗ ಮದುವೆಯಾಗಿ ಎಂಟು ವರ್ಷವಾಯಿತು. ನನ್ನದು ಪ್ರೇಮವಿವಾಹವಲ್ಲ.  ಕೌಟುಂಬಿಕ ಒತ್ತಡದಿಂದಾಗಿ ಅವರ ಇಷ್ಟದ ಹುಡುಗಿಯನ್ನೇ ಮದುವೆಯಾದೆ. ಈಗ ಒಬ್ಬಳು ಮಗಳಿದ್ದಾಳೆ. ನಾನು ನನ್ನ ದಾಂಪತ್ಯವನ್ನು ನನ್ನ ಕರ್ತವ್ಯದ ದೃಷ್ಟಿಯಿಂದ ನಿಭಾಯಿಸುತ್ತಿದ್ದೇನೆ. ನನಗೆ ನನ್ನ ಹೆಂಡತಿ ಬಗ್ಗೆ ಜವಾಬ್ದಾರಿ ಇದ್ದರೂ ನನ್ನ ಕನಸಿನ ಹುಡುಗಿ ಅವಳೆಂದೂ ಆಗಿರಲಿಲ್ಲ. ನಾನು ನನ್ನ ಮದುವೆಗಿಂತಲೂ ಮೊದಲು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ನನ್ನ ಪ್ರೀತಿಯನ್ನು ಅವಳ ಹತ್ತಿರ ಹೇಳಿಕೊಳ್ಳಲೇ ಆಗಿರಲಿಲ್ಲ. ನಮ್ಮ ಜಾತಿಯೂ ಬೇರೆಯಾದ್ದರಿಂದ ನಮ್ಮ ಮದುವೆಗೆ ಹಿರಿಯರು ಒಪ್ಪುವುದೂ ಕಷ್ಟವಿತ್ತು. ಮನೆಯವರ ವಿರೋಧದ ಹೊರತಾಗಿಯೂ ಮದುವೆಯಾಗುವ ಧೈರ್ಯ ನನಗಿರಲಿಲ್ಲ. ಅದೂ ಅಲ್ಲದೇ ಆ ಸಮಯದಲ್ಲಿ ಆ ಹುಡುಗಿಗೆ ನನ್ನ ಬಗ್ಗೆ ಯಾವ ಭಾವನೆ ಇದೆ ಅಂತೂ ಗೊತ್ತಿರಲಿಲ್ಲ. ಅಂತೂ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮದುವೆ ಮಾಡಿಕೊಂಡು ನೀರಸವಾದ ಬದುಕು ಸಾಗಿಸುತ್ತಿದ್ದೇನೆ. ನಂತರ ಗೊತ್ತಾಯಿತು ಆ ಹುಡುಗಿಯೂ ನನ್ನನ್ನು ಮನದಲ್ಲೇ ಪ್ರೀತಿಸುತ್ತಿದ್ದಳಂತೆ. ಅವಳೂ ಸಂಕೋಚದಿಂದ ನನ್ನ ಹತ್ತಿರ ಹೇಳಿಕೊಂಡಿರಲಿಲ್ಲವಂತೆ. ಅದು ನನ್ನ ಮದುವೆಯಾದ ನಂತರ ಅವಳ ಗೆಳತಿಯಿಂದ ತಿಳಿಯಿತು. ಆಗಾಗ ನಾನು ಇಷ್ಟ ಪಡುತ್ತಿದ್ದ ಹುಡುಗಿಯ ನೆನಪಾಗುತ್ತಿತ್ತು. ಅವಳನ್ನು ನೋಡಬೇಕು ಅನ್ನುವ ತುಡಿತ ಕೆಲವೊಮ್ಮೆ ಕಾಡುತ್ತಿತ್ತು. ಅದಕ್ಕೆ ಸರಿಯಾಗಿ ಕೆಲವು ದಿನಗಳ ಹಿಂದೆ ಅವಳನ್ನು ಫೇಸ್‍ಬುಕ್ಕಿನಲ್ಲಿ ನೋಡಿದೆ. ಅವಳಾಗಿಯೇ ನನಗೆ ಫ್ರೆಂಡ್‍ರಿಕ್ವೆಸ್ಟ್ ಕಳಿಸಿದ್ದಳು. ನಾನು ಅವಳಿಗೆ ಎಸ್ ಅಂದೆ. ಅವಳು ತನ್ನ ಗಂಡ ಮತ್ತು ಮಕ್ಕಳ ಜೊತೆಗಿದ್ದ ಫೋಟೋಗಳನ್ನೆಲ್ಲ ಅದರಲ್ಲಿ ಅಪ್‍ಲೋಡ್ ಮಾಡಿದ್ದಳು. ಸಂತೋಷದಲ್ಲಿರುವಂತೆ ಕಾಣುತ್ತಾಳೆ. ಅವಳ ಜೊತೆಗಿನ ಫ್ರೆಂಡ್‍ಶಿಪ್ ಮುಂದುವರಿಸಬೇಕೆನ್ನುವ ಆಸೆ ಮನದಲ್ಲಿ ಮೂಡುತ್ತಿದೆ. ಅವಳ ಬಗ್ಗೆ ಕಂಡ ಕನಸೆಲ್ಲ ನೆನಪಾಗಿ ಚಾಟ್ ಮಾಡಲು ಮನಸ್ಸು ಹಾತೊರೆಯುತ್ತಿದೆ. ಅದು ತಪ್ಪಾ?

: ನಿಮಗೆ ಅವಳ ಜೊತೆ ಬರೀ ಚಾಟ್ ಮಾಡಬೇಕು ಅನ್ನುವ ಆಸೆಯಿದ್ದರೆ ತೊಂದರೆಯಿರಲಿಲ್ಲ. ಗಂಡು-ಹೆಣ್ಣಿನ ನಡುವೆ ಆರೋಗ್ಯಕರ ಫ್ರೆಂಡ್‍ಶಿಪ್ ಇದ್ದರೆ ಯಾವಾಗಲೂ ಅಡ್ಡಿ ಇಲ್ಲ. ಆದರೆ ನಿಮ್ಮ ಸ್ನೇಹ ಬೇರೆಯದಕ್ಕೆ ಎಡೆ ಮಾಡಿಕೊಟ್ಟರೆ ಕಷ್ಟ. ಈಗಾಗಲೇ ನೀವು ಅವಳ ಬಗ್ಗೆ ಕನಸು ಕಾಣುತ್ತಿದ್ದೀರಿ. ಹಾಗಿರುವಾಗ ನಿಮ್ಮ ಸ್ನೇಹವೂ ಶುರುವಾದರೆ ನಿಮ್ಮ ಮನಸ್ಸಿನ ಬಗ್ಗೆ ನಿಮಗೇ ಹತೋಟಿ ತಪ್ಪಿದರೆ ಅವಾಂತರವಾಗುತ್ತದೆ. ಅವಳೂ ಈಗ ಮದುವೆಯಾಗಿ ಮಕ್ಕಳ ಜೊತೆ ಸುಖಸಂಸಾರ ಮಾಡುತ್ತಿದ್ದಾಳೆÉ. ಅವಳು ಹಿಂದಿನ ತನ್ನ ಪ್ರೀತಿಯನ್ನು ಮರೆತು ಜೀವನದಲ್ಲಿ ಈಗಾಗಲೇ ಮುಂದೆ ಹೋಗಿದ್ದಾಳೆÉ. ನೀವೂ ಹೆಂಡತಿಯ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದೀರಿ. ಅದರ ಫಲವಾಗಿ ಮಗಳೂ ಇದ್ದಾಳೆ. ಇಂತಹ ಸಮಯದಲ್ಲಿ ಆ ಹುಡುಗಿಯ ಜೊತೆಗಿನ ಸ್ನೇಹ ಅಷ್ಟು ಸಮಂಜಸವಲ್ಲ. ನಿಮ್ಮ ನಡುವೆ ರೆಗ್ಯುಲರ್ ಚಾಟಿಂಗ್ ಪ್ರಾರಂಭವಾದರೆ ಪ್ರಯೋಜನಕ್ಕಿಂತ ಅದರಿಂದ ತೊಂದರೆಯೇ ಜಾಸ್ತಿ. ನಿಮ್ಮ ಸ್ನೇಹ ಮುಂದುವರಿದು ನಿಮ್ಮಿಬ್ಬರ ಮನದ ಮೂಲೆಯಲ್ಲಿ ಇದ್ದ ಪ್ರೀತಿ ಸ್ಫೋಟಿಸಿದರೆ ಮತ್ತಿಷ್ಟು ಬವಣೆಯೇ ಜಾಸ್ತಿ. ಇಬ್ಬರ ಕುಟುಂಬದಲ್ಲೂ ಅಶಾಂತಿ ತಲೆದೋರಬಹುದು. ನಿಮ್ಮಿಬ್ಬರ ದಾರಿಯೇ ಈಗ ಬೇರೆಯಾದ ಕಾರಣ ಹಿಂದಿನದ್ದರ ಬಗ್ಗೆ ಯೋಚಿಸದೇ ನಿಮಗೆ ಸಿಕ್ಕ ಸಂಗಾತಿಯ ಜೊತೆಯೇ ತೃಪ್ತಿ ಮತ್ತು ಸುಖದಿಂದ ಇರಲು ಪ್ರಯತ್ನಿಸಿ.

LEAVE A REPLY