ಕ್ರಿಶ್ಚಿಯನ್ ಸಂಸ್ಥೆಗಳಲ್ಲೂ ಶೋಷಣೆ : ಪಿಣರಾಯಿ

ಪಿಣರಾಯಿ

ತಿರುವನಂತಪುರಂ : ಕಾಲೇಜು ವಿದ್ಯಾರ್ಥಿ ಜಿಷ್ಣು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಕೇರಳದಲ್ಲಿ ವಿದ್ಯಾರ್ಥಿ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಇದೆಲ್ಲವೂ ಖಾಸಗಿ ಕಾಲೇಜು ಆಡಳಿತಗಳ ದುರಾಡಳಿತದಿಂದ ಸಾಧ್ಯವಾಗಿದೆ ಎಂದು ಸೀಎಂ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.

ಕೋಝಿಕ್ಕೋಡಿನಲ್ಲಿ ದೇವಗಿರಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸೀಎಂ, “ಶಿಕ್ಷಣವೆಂಬುದು ಉದ್ಯಮವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಖಾಸಗಿ ಕಾಲೇಜುಗಳು ಲಾಭದಾಸೆಯಿಂದ ಹುಟ್ಟಿಕೊಳ್ಳುತ್ತಿವೆ. ಈ ಪ್ರವೃತ್ತಿ ಈಗ ಕ್ರಿಶ್ಚಿಯನ್ ಸಂಸ್ಥೆಗಳ ಆಡಳಿತದಲ್ಲೂ ಕಾಣಬಹುದಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಮಾತ್ರ ಇದಕ್ಕೆ ಭಿನ್ನವಾಗಿರಬಹುದು” ಎಂದು ಜಿಷ್ಣು ಸಾವು ಪ್ರಕರಣ ಖಂಡಿಸಿದ ಸೀಎಂ, ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ವಿರುದ್ಧ ಟೀಕಾಪ್ರಹಾರ ಮಾಡಿದರು.

ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡುವಾಗ ಹಣ ಮಾನದಂಡವಾಗಿರಬಾರದೆಂದು ಎಚ್ಚರಿಸಿದ ಸೀಎಂ, ಕಾಲೇಜು ಆಡಳಿತ ಮಂಡಳಿಯ ಅವ್ಯವಹಾರದ ವಿರುದ್ಧ ಎಲ್ಲ ವಿದ್ಯಾರ್ಥಿಗಳು ದೂರು ನೀಡಲು ಮುಂದೆ ಬರುವುದಿಲ್ಲ. ಆದಾಗ್ಯೂ ಖಾಸಗಿ ಕಾಲೇಜುಗಳ ವಿರುದ್ಧ ಕೆಲವು ವಿದ್ಯಾರ್ಥಿಗಳು ನೀಡಿರುವ ದೂರಿನ ಬಗ್ಗೆ ಸೂಕ್ತ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದರು.

ಕ್ರಿಶ್ಚಿಯನ್ ಸಂಸ್ಥೆಗಳ ವಿರುದ್ಧದ ಸೀಎಂ ಟೀಕೆ ಚರ್ಚುಗಳನ್ನು ಕೆರಳಿಸಿದೆ. “ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಿಶ್ಚಿಯನ್ ಸಭಾಗಳು ಮತ್ತು ಶಿಕ್ಷಣದಲ್ಲಿ ಖಾಸಗಿ ಆಡಳಿತಗಳ ಪಾತ್ರ ಕಡೆಗಣಿಸುವಂತಿಲ್ಲ” ಎಂದು ಸೈರೋ-ಮಲಬಾರ್ ಚರ್ಚ್ ಮೇಜರ್ ಆರ್ಚ್‍ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಸೀಎಂ ಟೀಕೆಗೆ ಪ್ರತಿ ಹೇಳಿಕೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಯಾವುದೇ ರೀತಿಯ ದುರುಪಯೋಗವಾದಲ್ಲಿ ಅಂತಹ ಸಂಸ್ಥೆಗಳನ್ನು ದಂಡಿಸಲು ಈಗಾಗಲೇ ಸಾಕಷ್ಟು ಕಾನೂನುಗಳಿವೆ ಎಂದವರು ತಿಳಿಸಿದರು.