ನಗರದಲ್ಲಿ ವಾರದೊಳಗೆ ಮರಳು ಗಣಿಗಾರಿಕೆ ಆರಂಭದ ನಿರೀಕ್ಷೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಿತ ವಲಯದ ನದಿ ತೀರಗಳಲ್ಲಿ ಮರಳು ಗಣಿಗಾರಿಕೆ ಒಂದು ವಾರದೊಳಗೆ ಆರಂಭವಾಗುವ ನಿರೀಕ್ಷೆ ಇದೆ. ಮರಳು ಗಣಿಗಾರಿಕೆಗೆ ಅರ್ಜಿ ಸಲ್ಲಿಸಿರುವ ಸುಮಾರು 50 ಅರ್ಜಿದಾರರು ಮರಳು ಗಣಿಗಾರಿಕೆಗೆ ಅನುಮತಿ ಪಡೆಯಲಿದ್ದಾರೆ.

ಸಿಆರ್ಝೆಡ್ ವಲಯದಲ್ಲಿ ಮರಳು ಗಣಿಗಾರಿಕೆಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ವಿಧಿಸುವ ಮೂಲಕ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ಹೇಳಿದ್ದಾರೆ.

ಮರಳು ಗಣಿಗಾರಿಕೆ ಪ್ರಕ್ರಿಯೆಯಲ್ಲಿ ವಿಧಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಚೆನ್ನೈ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪೀಠವು ಈ ವರ್ಷದ ಫೆಬ್ರುವರಿ 27ರಂದು ಸಿಆರ್ಝೆಡ್ ವಲಯದಲ್ಲಿ ಮರಳು ಗಣಿಗಾರಿಕೆಗೆ ನೀಡಲಾಗಿದ್ದ ಪರವಾನಗಿಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು ಮತ್ತು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತ್ತು.

50 ಮಂದಿ ಸಲ್ಲಿಸಿದ ಅರ್ಜಿಗಳನ್ನು ಕ್ರಮಾನುಗತವಾಗಿ ಜಿಲ್ಲಾಡಳಿತಕ್ಕೆ ನೀಡಲಾಗಿದೆ, ಮುಂದಿನ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಅರ್ಜಿ ಸಲ್ಲಿಸಲು ಆಗಸ್ಟ್ 26 ಅಂತಿಮ ಗಡುವು ನೀಡಲಾಗಿತ್ತು, ಅವಧಿಯೊಳಗೆ ಒಟ್ಟು 1,345 ಮಂದಿ ಅರ್ಜಿ ಸಲ್ಲಿಸಿದ್ದರು. ಇವುಗಳಲ್ಲಿ 939 ಅರ್ಜಿಗಳು ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅರ್ಜಿದಾರರು ಸಲ್ಲಿಸಬೇಕಾಗಿದ್ದ ಪೋಷಕ ದಾಖಲೆಪತ್ರಗಳ ಕೊರತೆಯಿಂದ ತಿರಸ್ಕರಿಸಲ್ಪಟ್ಟವು. ಜಿಲ್ಲಾಡಳಿತವು ಪೋಷಕ ದಾಖಲೆ ಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 24 ಕೊನೆಯ ದಿನಾಂಕವನ್ನು ನಿಗದಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಕೆಲವು ಅರ್ಜಿದಾರರು ಕಳೆದ ವರ್ಷ ಮತ್ತು 10 ವರ್ಷದ ಹಿಂದಿನ ದಾಖಲೆಗಳನ್ನು ನೀಡಿದ್ದಾರೆ. ಹಿಂದಿನ ಎಲ್ಲಾ ವರ್ಷಗಳ ದಾಖಲೆ ಪತ್ರಗಳನ್ನು ನೀಡಬೇಕು ಎಂಬುದರ ಬಗ್ಗೆ ತಿಳುವಳಿಕೆ ಇಲ್ಲದೆ ಹೀಗೆ ಮಾಡಿದ್ದಾರೆ. ಕಳೆದ ವರ್ಷ 423 ವ್ಯಕ್ತಿಗಳಿಗೆ ಪರವಾನಗಿ ಪ್ರಕಟಿಸಲಾಗಿತ್ತು. ಈ ವರ್ಷವೂ ಅದೇ ನಿರೀಕ್ಷೆಯಿದೆ. ಆದರೆ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಮರಳು ಎತ್ತುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.