ವಿಪರೀತ ಮದ್ಯಸೇವನೆಗೆ ಅಬಕಾರಿ ಪೊಲೀಸ್ ಕುಮ್ಮಕ್ಕು ನೀಡುತ್ತಿವೆ

ದ ಕ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರು, ಬೆಳ್ತಂಗಡಿ ತಾಲೂಕಿನಾದ್ಯಂತ ಮದ್ಯ ಸೇವಿಸಿ ಸಾರ್ವಜನಿಕ ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಮಲಗಿದವರನ್ನು  ಬಿದ್ದಿರುವುದನ್ನು  ಸ್ಥಳೀಯ ಪೊಲೀಸ್ ಅಥವಾ ಅಬಕಾರಿ ಇಲಾಖೆ ಯಾಕೆ ಗಮನಿಸುತ್ತಿಲ್ಲ ? ಮದ್ಯದಂಗಡಿ, ಬಾರುಗಳಿಂದ ಪೊಲೀಸ್ ಮತ್ತು ಅಬಕಾರಿ ಇಲಾಖಾಧಿಕಾರಿಗಳಿಗೆ ಹೇರಳ ಮಾಸಿಕ ಮಾಮೂಲು ರವಾನೆಯಾಗುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಕಾನೂನು ಪ್ರಕಾರ ಮದ್ಯದಂಗಡಿಗಳಲ್ಲಿ ಕೇವಲ ಮದ್ಯದ ಬಾಟಲಿಗಳನ್ನು ಮಾರಾಟ ಮಾಡಬೇಕು. ಆದರೆ ಅಲ್ಲಿಯೇ ಒಂದು ಕೊಠಡಿಯಲ್ಲಿ ಕುಡಿಯಲು ವ್ಯವಸ್ಥೆ ಮಾಡಿರುವುದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯಿಸುತ್ತಾರೆ.
ಮದ್ಯದಂಗಡಿಗಳಿಂದ ಅಕ್ರಮ ಕಾರ್ಯಾಚರಣೆ ವಿರುದ್ಧ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ಎಸ್ ಪಿ ಬೊರಸೆಯವರು ಕ್ರಮ ಜರುಗಿಸಬೇಕಾಗಿದೆ. ಬೆಳ್ಳಂ ಬೆಳಗ್ಗೆ ಮದ್ಯದ ಬಾಟಲಿಗಳು ಮಾರಾಟವಾಗುತ್ತಿದ್ದರೂ ಸ್ಥಳೀಯ ಪೊಲೀಸ್ ಇನ್ಸ್‍ಪೆಕ್ಟರ್ ಅಥವಾ ಅಬಕಾರಿ ಇನ್ಸ್‍ಪೆಕ್ಟರ್ ಯಾವುದೇ ತನಿಖೆ, ದಸ್ತಗಿರಿ ಮಾಡುತ್ತಿಲ್ಲ.
ರಾತ್ರಿವೇಳೆ ಶೇಕಡ 50ರಷ್ಟು ಮಂದಿ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದರೂ ಟ್ರಾಫಿಕ್ ಪೊಲೀಸಾಧಿಕಾರಿಗಳು ತಪಾಸಣೆ ಮಾಡುತ್ತಿಲ್ಲವಾದುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇಂಟರಸೆಪ್ಟರ್ ವಾಹನವಿದ್ದರೂ ಟ್ರಾಫಿಕ್ ಪೊಲೀಸ್ ನಿಯಂತ್ರಣ ಇನ್ಸಪೆಕ್ಟರುಗಳು ಜಿಲ್ಲೆಯಾದ್ಯಂತ ರಾತ್ರಿ 8ರಿಂದ 11 ಗಂಟೆಯ ತನಕ ಸಮರ್ಪಕವಾಗಿ ವಾಹನ ತಪಾಸಣೆ ಮಾಡದಿರುವುದನ್ನು ಐಜಿಪಿ ಹರಿಶೇಖರನ್ ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಅಧಿಕಾರಿಗಳಿಗೆ ವಿಪರೀತ ಮದ್ಯಸೇವನೆ ಮಾಡಿ ವಾಹನ ಚಲಾವಣೆ ಮಾಡಿದವರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ದಿನವಹಿ ಮಾಹಿತಿ ತರಿಸಿಕೊಳ್ಳಲಿ. ಮದ್ಯವ್ಯಸನಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ. ಸಾರ್ವಜನಿಕ ಅಸಹ್ಯತೆಯನ್ನು ನಿಲ್ಲಿಸಲಿ

  • ಪುತ್ತೂರು ಬಿ  ಗುಣಾಕರ