ಮಾಜಿ ಶಾಸಕ ರಘುಪತಿ ಭಟ್ ಮಾಲಕತ್ವದ ಹೋಟೆಲಿಗೆ ಬೀಗ ಜಡಿದ ಅಬಕಾರಿ ಇಲಾಖೆ

ಮಾಜಿ ಶಾಸಕನ `ಕಂಟ್ರಿ ಇನ್ ಸೂಟ್ಸ್' ಹೋಟೆಲ್

ಮಹಿಳಾ ಅಧಿಕಾರಿಗಳಿಬ್ಬರು ಸಸ್ಪೆಂಡ್

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿಯ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್ ಮಾಲಕತ್ವದ ಮಣಿಪಾಲ ಡೀಸಿ ಕಚೇರಿ ಬಳಿ ಇರುವ `ಕಂಟ್ರಿ ಇನ್ ಸೂಟ್ಸ್’ ಇಂಟರನ್ಯಾಷನಲ್ ಹೋಟೆಲಿಗೆ ಆಗಸ್ಟ್ ತಿಂಗಳಲ್ಲಿ ದಾಳಿ ನಡೆಸಿದ್ದರೂ ಅಕ್ರಮ ಮದ್ಯ ವಶಪಡಿಸಿಕೊಳ್ಳದೇ ಪ್ರಕರಣವನ್ನು ಮುಚ್ಚಿಹಾಕಿದ ಇಬ್ಬರು ಅಬಕಾರಿ ಮಹಿಳಾ ಅಧಿಕಾರಿಗಳನ್ನು ಬೆಂಗಳೂರಿನ ಅಬಕಾರಿ ಆಯುಕ್ತರು ಮಂಗಳವಾರ ಅಮಾನತುಗೊಳಿಸಿ, ಕಂಟ್ರಿ ಇನ್ ಸೂಟ್ಸ್ ಹೋಟೆಲಿಗೆ ಬೀಗ ಜಡಿದಿದ್ದಾರೆ.

ನಗರದ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಅಬಕಾರಿ ಕಚೇರಿಯಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಜ್ಯೋತಿ ಹಾಗೂ ಶುಭದಾ ನಾಯ್ಕ ಅಮಾನತುಗೊಂಡವರು. ಇವರಿಬ್ಬರು 2016, ಆಗಸ್ಟ್ 27ರಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಮಾಲಕತ್ವದ `ಕಂಟ್ರಿ ಇನ್ ಸೂಟ್ಸ್ ಇಂಟರನ್ಯಾಷನಲ್’ ಹೋಟೆಲಿಗೆ ದಾಳಿ ನಡೆಸಿದ್ದರು. ಆದರೆ ಅಲ್ಲಿ ಸರಬರಾಜು ಆಗುತ್ತಿದ್ದ ಯಾವುದೇ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲ್ಲದೇ ಪ್ರಕರಣವನ್ನು ಮುಚ್ಚಿ ಹಾಕಿ ಕರ್ತವ್ಯ ಲೋಪ ಎಸಗಿದ್ದರು ತಿಳಿದುಬಂದಿದೆ.

ಈ ಬಗ್ಗೆ ಕಂಟ್ರಿ ಇನ್ ಸೂಟ್ಸ್ ಹೋಟೆಲ್ ಪಾಲುದಾರ ಬೆಂಗಳೂರು ಮೂಲದ ಸದಾನಂದ ಶೇರ್ವೇಗಾರ್ ಬೆಂಗಳೂರಿನ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದರು. ಬೆಂಗಳೂರಿನ ಅಬಕಾರಿ ಆಯುಕ್ತರು ಹಾಗೂ ಉಡುಪಿ ಅಬಕಾರಿ ಅಧಿಕಾರಿಗಳು ಮಂಗಳವಾರ ಹೋಟೆಲ್ ಸೀಸಿಟೀವಿ ದೃಶ್ಯ ಪರಿಶೀಲಿಸಿದಾಗ ಉಡುಪಿಯ ಇಬ್ಬರು ಮಹಿಳಾ ಅಧಿಕಾರಿಗಳಾದ ಜ್ಯೋತಿ ಹಾಗೂ ಶುಭದಾ ನಾಯ್ಕ ಕರ್ತವ್ಯ ಲೋಪ ಎಸಗಿರುವುದು ಗೊತ್ತಾಗಿದೆ. ಹಾಗಾಗಿ ಅವರಿಬ್ಬರನ್ನು ಅಬಕಾರಿ ಆಯುಕ್ತರು ಅಮಾನತುಗೊಳಿಸಿ, ಹೊಟೇಲಿಗೆ ಬೀಗ ಜಡಿದಿದ್ದಾರೆ.