ವೆಳ್ಳರಿಕುಂಡ್, ಮಂಜೇಶ್ವರದಲ್ಲಿ ಶೀಘ್ರವೇ ಅಬಕಾರಿ ಸರ್ಕಲ್ ಕಚೇರಿಗೆ ಚಾಲನೆ

ಋಷಿರಾಜ್ ಸಿಂಗ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಜಿಲ್ಲೆಯಲ್ಲಿ ಹೊಸತಾಗಿ ಸ್ಥಾಪನೆಯಾದ ಮಂಜೇಶ್ವರ ಹಾಗೂ ವೆಳ್ಳರಿಕುಂಡುಗಳಲ್ಲಿ ಶೀಘ್ರವೇ ಅಬಕಾರಿ ಸರ್ಕಲ್ ಕಚೇರಿಗೆ ಚಾಲನೆ ನೀಡುವುದಾಗಿ ಅಬಕಾರಿ ಕಮಿಷನರ್ ಋಷಿರಾಜ್ ಸಿಂಗ್ ಹೇಳಿದ್ದಾರೆ.

ಕುಂಬಳೆ ಅಬಕಾರಿ ಕಚೇರಿಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. “ಕಾಸರಗೋಡಿನಲ್ಲಿ ಹೊಸತಾಗಿ ಆರಂಭಿಸಲಿರುವ ಸರ್ಕಲ್ ಕಚೇರಿಗಳ ಕೆಲಸ ಕಾರ್ಯಗಳು ಪೂರ್ತಿಯಾಗಿದ್ದು, ಈ ತಿಂಗಳ ಕೊನೆಗೆ ಮಂಜೇಶ್ವರ ಹಾಗೂ ವೆಳ್ಳರಿಕುಂಡುಗಳಲ್ಲಿ ಸರ್ಕಲ್ ಕಚೇರಿ ಸ್ಥಾಪಿಸಲಾಗುವುದು. ಕೇರಳಕ್ಕೆ ಅನ್ಯರಾಜ್ಯಗಳಿಂದ ಮದ್ಯ ಸಾಗಾಟ ಇಮ್ಮಡಿಯಾಗಿದೆ. ಈ ಸಂಬಂಧ ದಿನದಿಂದ ದಿನಕ್ಕೆ ಲಭಿಸುತ್ತಿರುವ ದೂರುಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಂಜೇಶ್ವರ ಹಾಗೂ ವೆಳ್ಳರಿಕುಂಡಿನಲ್ಲಿ ಅಬಕಾರಿ ಸರ್ಕಲ್ ಕಚೇರಿ ಅನಿವಾರ್ಯ” ಎಂದರು.