ಪರೀಕ್ಷೆ ದಿನ ಭೇಟಿಯಾದ ಆ ಹುಡುಗನದೇ ಧ್ಯಾನ

ಪ್ರ : ನಾನು ಎರಡನೇ ವರ್ಷದ ಡಿಗ್ರಿ ಪರೀಕ್ಷೆ ಬರೆದಿದ್ದೇನೆ. ಆ ದಿನ ಇನ್ನೂ ನೆನಪಿದೆ. ಅಂದು ನನಗೆ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ನಮ್ಮ ತಾಯಿಯ ತಾಯಿ ತೀರಿ ಹೋದ ಕಾರಣ ಮನೆಯವರೆಲ್ಲರೂ ಊರಿಗೆ ಹೋಗಿದ್ದರು. ಮನೆಕೆಲಸವೆಲ್ಲ ಮುಗಿಸಿ ಕಾಲೇಜಿಗೆ ಹೊರಡುವಾಗಲೇ ಸ್ವಲ್ಪ ತಡವಾಗಿತ್ತು. ಬಸ್ ಮಿಸ್ ಆಗಿತ್ತು. ಎಲ್ಲಾ ರಿಕ್ಷಾಗಳೂ ತುಂಬಿಕೊಂಡೇ ಹೊಗುತ್ತಿದ್ದವು. ಅಂತೂ ಕೊನೆಗೂ ಒಂದು ಖಾಲಿರಿಕ್ಷಾ ಹಿಡಿದುಕೊಂಡು ಕಾಲೇಜಿನ ದಾರಿ ಹಿಡಿಯುವಾಗ ಮತ್ತಿಷ್ಟು ಲೇಟ್. ನನ್ನ ದುರಾದೃಷ್ಟಕ್ಕೆ ರಿಕ್ಷಾ ದಾರಿಯಲ್ಲೇ ಕೆಟ್ಟು ಹೋಗಬೇಕೇ? ಅಂತೂ ನನಗೆ ಪರೀಕ್ಷೆ ಬರೆಯುವ ಯೋಗವಿಲ್ಲವೆಂದು ಸಪ್ಪೆಮೋರೆ ಹಾಕಿಕೊಂಡು ಯಾರಾದರೂ ಸಹಾಯಕ್ಕೆ ಸಿಗಬಹುದಾ ಅಂತ ಆಕಡೆ ಈಕಡೆ ನೋಡುತ್ತಿರುವಾಗ ನಮ್ಮ ಕ್ಲಾಸಿನ ಬೇರೆ ಸೆಕ್ಷನ್ನಿನಲ್ಲಿ ಓದುತ್ತಿರುವ ಈ ಹುಡುಗ ಬೈಕಿನಲ್ಲಿ ಬರುತ್ತಿದ್ದ. ಕೆಟ್ಟು ನಿಂತ ರಿಕ್ಷಾದ ಪಕ್ಕದಲ್ಲಿ ಟೆನ್ಷನ್ನಿನಿಂದ ನಿಂತ ನನ್ನನ್ನು ಗಮನಿಸಿದವನೇ ಬೈಕ್ ನಿಲ್ಲಿಸಿ ಹತ್ತುವಂತೆ ಸನ್ನೆ ಮಾಡಿದ. ಅವಸರದಲ್ಲಿ ಕಣ್ಣಿನಲ್ಲೇ ಥ್ಯಾಂಕ್ಸ್ ಎಕ್ಸಾಂ ಹಾಲಿಗೆ ಹೋದೆ. ಆ ದಿನದಿಂದ ನನಗೆ ಅವನದೇ ಧ್ಯಾನವಾಗಿ ಬಿಟ್ಟಿದೆ. ಪರೀಕ್ಷೆ ಇದ್ದಷ್ಟು ದಿನವೂ ಆಗಾಗ ಇಬ್ಬರ ಕಣ್ಣುಗಳೂ ಒಂದಾಗುತ್ತಿದ್ದವು. ಈಗಲೂ ಅಪರೂಪಕ್ಕೊಮ್ಮೆ ಸಿಗುತ್ತಾನೆ. ಮುಗುಳ್ನಗೆಯ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ. ನನ್ನ ನೋಡಿದಾಗ ಅವನ ಮುಖದಲ್ಲಿ ಮೂಡುವ ಮಂದಹಾಸವೇ ನನ್ನ ಇಡೀ ದಿನದ ಉತ್ಸಾಹಕ್ಕೆ ಕಾರಣವಾಗುತ್ತಿತ್ತು. ಈಗ ಹೇಗೆ ಮುಂದುವರಿಯಲಿ?

: ಥ್ಯಾಂಕ್ ಗಾಡ್ ಅಂತೂ ಒಂದು ಸುತ್ತಿನ ಪರೀಕ್ಷೆ ಮುಗಿಸಿದ್ದೀರಿ. ಅದಲ್ಲದಿದ್ದರೆ ಆ ಹುಡುಗನ ಧ್ಯಾನದಲ್ಲಿ ಪರೀಕ್ಷೆಯಲ್ಲಿ ಗೋತಾ ಹೊಡೆದರೆ ಗತಿಯೇನು? ಆಗಿರುವ ಪರೀಕ್ಷೆಯನ್ನಾದರೂ ಚೆನ್ನಾಗಿ ಮಾಡಿದ್ದೀರಿ ತಾನೇ? ನಿಮ್ಮ ವಯಸ್ಸೇ ಅಂತದ್ದು. ಹುಚ್ಚು ಕುದುರೆಯಂತೆ ಓಡುತ್ತಿರುತ್ತದೆ. ನಿಮಗಾಗಿದ್ದು ಕ್ರಶ್ಶೋ, ಪ್ರೀತಿಯೋ ನಿರ್ಧರಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಈಗ ಆ ಹುಡುಗನ ಜೊತೆ ಸ್ನೇಹ ಮಾಡಲು ಅಡ್ಡಿ ಇಲ್ಲ. ಮೊದಲು ಹಲೋ, ಹಾಯ್, ಬಾಯ್‍ನಿಂದ ನಿಮ್ಮ ಸಂಭಾಷಣೆ ಪ್ರಾರಂಭಿಸಬಹುದು. ಅವನ ರೆಸ್ಪಾನ್ಸ್ ನೋಡಿಕೊಂಡು ಮುಂದಡಿ ಇಡಬಹುದು. ಆದರೂ ಹೆಚ್ಚು ಭಾವನಾತ್ಮಕವಾಗಿ ಈಗ ಹಚ್ಚಿಕೊಳ್ಳದಿರುವುದೇ ಕ್ಷೇಮ. ಪ್ರೀತಿಯಲ್ಲಿ ಈಗಲೇ ಮುಳುಗಿಬಿಟ್ಟರೆ ಓದು ಹಿಂದೆ ಬೀಳಬಹುದು. ನಿಮ್ಮ ಎಲ್ಲ ಕಾರ್ಯಚಟುವಟಿಕೆಗಳು ಆ ಹುಡುಗನ ಸುತ್ತಲೇ ಗಿರಕಿ ಹೊಡೆಯುವಂತಾಗುತ್ತದೆ. ಈಗಿರುವ ಸ್ವಾತಂತ್ರ್ಯ ಆಗ ಸಿಗುವುದು ಕಷ್ಟ. ಯಾಕೆ ಈಗಲೇ ಅಂತಹ ಕೂಪಕ್ಕೆ ಬೀಳುತ್ತೀರಿ. ನೀವು ಕ್ಲಾಸ್‍ಮೇಟ್ ಅನ್ನುವ ದೃಷ್ಟಿಯಿಂದ ಪರೀಕ್ಷೆ ದಿನ ಅವನು ನಿಮಗೆ ಸಹಾಯ ಮಾಡಿರಬಹುದು. ಯಾರೇ ಆ ಪರಿಸ್ಥಿತಿಯಲ್ಲಿದ್ದರೂ ಮಾನವೀಯತೆಯ ದೃಷ್ಟಿಯಿಂದ ಹೆಲ್ಪ್ ಮಾಡ್ತಾರೆ. ಅದಕ್ಕೆ ನೀವು ಅಷ್ಟೊಂದು ಎಕ್ಸೈಟ್ ಆಗುವ ಪ್ರಮೇಯ ನನಗಂತೂ ಕಾಣುತ್ತಿಲ್ಲ. ಹೆಚ್ಚು ಅವನ ಹಿಂದೆ ಬೀಳದೇ ಸಂಯಮದಿಂದಿರಿ. ಅವನ ಗುಣಾವಗುಣಗಳನ್ನು ಪರೀಕ್ಷಿಸಿಯೇ ಮುಂದಡಿ ಇಡಿ.