ಮಾಜಿ ಕೆನರಾ ಸಂಸದ ದೇವರಾಯ ನಾಯ್ಕ ಇನ್ನಿಲ್ಲ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಕೆನರಾ ಕ್ಷೇತ್ರವನ್ನು 4 ಸಲ ಪ್ರತಿನಿಧಿಸಿದ್ದ ಹಿರಿಯ ಸಮಾಜವಾದಿ ಚಿಂತಕ, ಕಾಂಗ್ರೆಸ್ ಮುಖಂಡ ದೇವರಾಯ ನಾಯ್ಕ (70) ಕೆಲವು ಕಾಲದ ಅನಾರೋಗ್ಯದ ಬಳಿಕ ಬುಧವಾರ ಸಂಜೆ ಶಿರಸಿಯ ಮನೆಯಲ್ಲೇ ನಿಧನರಾಗಿದ್ದಾರೆ.

1961ರಲ್ಲಿ ಪ್ರಜಾಸಮಾಜವಾದಿ ಪಕ್ಷದಿಂದ ರಾಜಕೀಯ ಪ್ರವೇಶ ಮಾಡಿ, ಮುಂದೆ 1969ರಲ್ಲಿ ಈ ಪಕ್ಷವು ಕಾಂಗ್ರೆಸ್ ಜತೆ ವಿಲೀನವಾದಾಗ ಇಂದಿರಾ ಗಾಂಧಿ ಜೊತೆ ಗುರುತಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. ಬಳಿಕ 1980, 1984, 1989, 1991ರಿಂದ 4 ಬಾರಿ ಕೆನರಾ ಸಂಸದರಾಗಿದ್ದರು.

ಕಾಂಗ್ರೆಸ್ ನೀತಿಯಿಂದ ಬೇಸತ್ತು ಕೆಲವು ಕಾಲ ಜೆಡಿಎಸ್ಸಿನಲ್ಲಿ ಗುರುತಿಸಿಕೊಂಡ ಇವರು, ಹಲವು ವರ್ಷದಿಂದ ರಾಜಕೀಯದಲ್ಲಿ ತಟಸ್ಥರಾಗಿದ್ದರು. ಮಾಜಿ ಸಂಸದರಾದ ನಂತರವೂ ರಾಜಕೀಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ಹಾಗೂ ಜನಪ್ರತಿನಿಧಿಗಳಲ್ಲಿ  ಹಣ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದರು.