ಮಾಜಿ ಬಾಯ್‍ಫ್ರೆಂಡ್ ಸ್ನೇಹಿತೆಯನ್ನೇ ಪಟಾಯಿಸಿದ

ಪ್ರ : ಅವನ ಜೊತೆಗಿನ ಎರಡು ವರ್ಷದ ರಿಲೇಶನ್ಶಿಪ್ ಈಗ ಅಂತ್ಯಗೊಂಡಿದೆ. ಅವನ ಡಬಲ್‍ಗೇಮಿನಿಂದ ಬೇಸತ್ತು ಅವನಿಂದಲೇ ದೂರವಾಗಿದ್ದೇನೆ. ಹುಡುಗಿಯರೆಂದರೆ ಅವನಿಗೊಂದು ಆಟದ ವಸ್ತು ಅಷ್ಟೇ. ಅವನ ಜೊತೆಗೆ ಕಳೆದ ರಸನಿಮಿಷಗಳು ನೆನಪಾಗುವಾಗ ಅವನೂ ಒಳ್ಳೆಯವನಾಗಿರಬಾರದಿತ್ತೇ ಅಂತ ಮನಸ್ಸು ಚೀರಿ ಕೇಳುತ್ತದೆ. ಅವನ ಮೋಸ ನೆನೆದು ಈಗಲಾದರೂ ಬಚಾವಾದೆನಲ್ಲಾ ಅಂತ ನನ್ನನ್ನೇ ಸಮಾಧಾನಿಸಿಕೊಳ್ಳುತ್ತೇನೆ. ಅವನನ್ನು ಕಷ್ಟಪಟ್ಟು ಮರೆಯುತ್ತಿದ್ದೇನೆ. ಆದರೆ ಅವನನ್ನು ಮರೆಯಲು ನನಗೆ ಕಷ್ಟವಾಗುತ್ತಿರಲು ಮತ್ತೊಂದು ಕಾರಣವೆಂದರೆ ಅವನು ನನ್ನ ಗೆಳತಿಯನ್ನೇ ಪಟಾಯಿಸಿದ್ದು. ಅವರಿಬ್ಬರೂ ಈಗ ನನ್ನೆದುರೇ ಡೇಟಿಂಗ್ ಮಾಡುತ್ತಿದ್ದಾರೆ. ಅವನು ಒಳ್ಳೆಯವನಲ್ಲಾ ಅಂತ ನನ್ನ ಗೆಳತಿಗೆ ಹೇಳಲು ಹೋಗಿದ್ದರಿಂದ ಅವಳೂ ಈಗ ನನ್ನಿಂದ ದೂರವಾಗಿದ್ದಾಳೆ. ತನ್ನ ಸ್ನೇಹಿತೆಯ ಮಾಜೀ ಹುಡುಗನ ಜೊತೆ ರಿಲೇಶನ್ಶಿಪ್ ಮಾಡಿಕೊಳ್ಳುವ ಮೊದಲು ಅವಳು ಸ್ವಲ್ಪವಾದರೂ ಯೋಚಿಸಬೇಕಿತ್ತಲ್ಲವೇ? ನನಗೆ ನೋವಾಗಬಹುದು ಅನ್ನುವ ಕಲ್ಪನೆಯೂ ಅವಳಿಗಿಲ್ಲವೇ? ಈ ಹುಡುಗ ಬೇಕೆಂದೇ ನನ್ನ ಹೊಟ್ಟೆಯುರಿಸಲು ಅವಳ ಸಂಗ ಮಾಡುತ್ತಿರಬಹುದೇ? ನಾನಾಗಿ ಅವನನ್ನು ಪುನಃ ಓಲೈಸಲಿ ಅಂತ ಅವನ ಉದ್ದೇಶವಿರಬಹುದೇ? ನನ್ನ ಗೆಳತಿಯೂ ಮೋಸಹೋದರೆ ಅನ್ನುವ ಭಯವೂ ಇದೆ. ನಾನೀಗ ಏನು ಮಾಡಲಿ?

ಉ : ನೀವಂತೂ ಅವನ ಜೊತೆಗೆ ಬ್ರೇಕಪ್ ಮಾಡಿಕೊಂಡಾಯಿತು. ಇನ್ಯಾಕೆ ಅವನ ಬಗ್ಗೆ ಯೋಚನೆ? ಅವನು ಯಾರ ಜೊತೆಗೇ ಹೋಗಲಿ ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಇನ್ನು ನಿಮ್ಮ ಗೆಳತಿಗೆ ಅವನ ಗುಣದ ಬಗ್ಗೆ ವಾರ್ನ್ ಮಾಡಿದ್ದೀರಿ. ಅದನ್ನು ಸ್ವೀಕರಿಸುವುದು ಬಿಡುವುದು ಅವಳಿಗೆ ಬಿಟ್ಟಿದ್ದು. ನೀವು ಅವಳನ್ನು ಫ್ರೆಂಡ್ ಅಂತ ಭಾವಿಸಿದ್ದರೂ ಅವಳಿಗೂ ಅದೇ ಭಾವನೆ ನಿಮ್ಮ ಮೇಲಿತ್ತೋ ಇಲ್ಲವೋ. ಅದೂ ಅಲ್ಲದೇ ಕೆಲವರಿಗೆ ಪ್ರೀತಿಯಲ್ಲಿರುವಾಗ ಉಳಿದವರೆಲ್ಲ ತಪ್ಪಾಗಿ ಕಾಣುತ್ತಾರೆ. ಬೇಕೆಂದೇ ತಮ್ಮ ಸಂಬಂಧವನ್ನು ಕೆಡಿಸಲು ಹೇಳುತ್ತಾರೆ ಅನ್ನುವ ಭಾವನೆ. ಅದಕ್ಕೇ ಪ್ರೀತಿ ಕುರುಡು ಅಂತ ಹೇಳುವುದು. ಅವನು ನಿಮ್ಮ ಹೊಟ್ಟೆಯುರಿಸಲೇ ಅವಳ ಸಹವಾಸ ಮಾಡಿದ್ದರೂ ನೀವು ಅದಕ್ಕೆ ಸೊಪ್ಪು ಹಾಕಬೇಡಿ. ಅವನು ನಿಮ್ಮ ಜೀವನದ ಮುಗಿದ ಅಧ್ಯಾಯ. ನಿಮ್ಮ ಗೆಳತಿಯೂ ಚಿಕ್ಕ ಹುಡುಗಿಯೇನಲ್ಲ. ರಾತ್ರಿ ಕಂಡ ಬಾವಿಗೆ ಎಚ್ಚರಿಸಿದರೂ ಹಗಲೇ ಹೋಗಿ ಬೀಳುತ್ತೇನೆ ಅಂದರೆ ಯಾರೇನು ಮಾಡಲು ಸಾಧ್ಯ?