ಗುರಿ ಬದಲಾಯಿಸುತ್ತಾ ಕಾರ್ಯ ಸಾಧಿಸುತ್ತಿರುವ `ಇವೆಂಟ್ ಮ್ಯಾನೇಜರ್’

ಇಲ್ಲಿಯತನಕ ಹೆಚ್ಚಿನವರು ಮೋದಿ ನೀಡಿದ ಆಶ್ವಾಸನೆಗಳಲ್ಲಿ ನಂಬಿಕೆಯಿರಿಸಿದ್ದಾರೆ. ಈ ನಂಬಿಕೆ ಉಳಿಸಿಕೊಳ್ಳುವ ಸಲುವಾಗಿ ಮೋದಿ ಇನ್ನೊಂದು ದೊಡ್ಡ ಯೋಜನೆ ಹಾಕಿಕೊಳ್ಳುವರೇ ಎಂದು ಕಾದು  ನೋಡಬೇಕು.

  • ಅರ್ಚಿಸ್ ಮೋಹನ್

ಎಪ್ರಿಲ್ 5, 2014 – ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ತಮ್ಮ ಲೋಕಸಭಾ ಕ್ಷೇತ್ರ ಗಾಂಧಿನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿ ಕೆಲವು ಭವಿಷ್ಯ ಸೂಚಕ ಹೇಳಿಕೆಗಳನ್ನು ನೀಡಿದ್ದರು.

ಆಗ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರೇಂದ್ರ ಮೋದಿ ಬಗ್ಗೆ ಕೇಳಿದಾಗ ಅವರು ಹೀಗೆಂದಿದ್ದರು “ಮೋದಿಯನ್ನು ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದನ್ನು ನೋಡಿದ್ದೇನೆ. ಅವರೊಬ್ಬ  ಬ್ರಿಲಿಯಂಟ್ ಇವೆಂಟ್ ಮ್ಯಾನೇಜರ್” ಎಂದಿದ್ದರು.

ಮೇ 26, 2014ರಂದು ಮೋದಿ  ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಅವರÀ ಇವೆಂಟ್ ಮ್ಯಾನೇಜ್ಮೆಂಟ್ ಕುಶಲತೆಯನ್ನು ನಾವು ಕಾಣುತ್ತಿದ್ದರೂ ಅವರ ಈ ಕುಶಲತೆ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಅವರು ನವೆಂಬರ್ 8ರಂದು ಘೋಷಿಸಿದ ನಂತರದ 50 ದಿನಗಳಲ್ಲಿ ಹೆಚ್ಚಿನ ಗಮನ ಪಡೆದಿದೆ.

ದುರದೃಷ್ಟವಶಾತ್ ಆಳವಾಗಿ ಯೋಚಿಸದೆ ನೋಟು ಅಮಾನ್ಯೀಕರಣ ಘೋಷಿಸಿದ ಪ್ರಧಾನಿ ಮಂದಿನ ಕೆಲ ವಾರಗಳಲ್ಲಿ ಪರಿಸ್ಥಿತಿ ತಮಗೆ ಹಾಗೂ ತಮ್ಮ ಸರಕಾರಕ್ಕೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಲು ಹೆಣಗಾಡಿದರು. 70ರ ದಶಕದ ಆರಂಭದಲ್ಲಿ ಇಂದಿರಾ ಗಾಂಧಿ ವಿರುದ್ಧ ಸೆಟೆದು ನಿಂತಿದ್ದ ಜಯಪ್ರಕಾಶ್ ನಾರಾಯಣ್ ಅವರಂತೆ ಮೋದಿಯನ್ನು ಪ್ರಶ್ನಿಸುವ ರಾಜಕೀಯ ನಾಯಕರೇ ಇಲ್ಲದಿರುವುದು ಅವರಿಗೆ  ಅನುಕೂಲಕರವಾಗಿದೆ.

ಗುರಿಗಳನ್ನು ಆಗಾಗ ಬದಲಾಯಿಸುತ್ತಲೇ ಇರುವುದರಿಂದ ರಿಸರ್ವ್ ಬ್ಯಾಂಕಿನಂತಹ ಸಂಸ್ಥೆಯ ವಿಶ್ವಾಸಾರ್ಹತೆಗೆ ಏಟು ಬಿದ್ದಿದೆ. ನೋಟು ಅಮಾನ್ಯೀಕರಣದಿಂದಾಗಿ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದೇ ಆದಲ್ಲಿ ಪ್ರಧಾನಿ ಇನ್ನಷ್ಟು ಅಪಾಯಕಾರಿ ಆಟಗಳನ್ನು ಆಡುವ ಸಾಧ್ಯತೆಯಿದೆ.

ಕಳೆದ 12 ವಾರಗಳಲ್ಲಿ ಪ್ರಧಾನಿ ನೀಡಿದ ಹೇಳಿಕೆಗಳಿಂದ ಅವರು ದೇಶದ 125 ಕೋಟಿ ಜನತೆಯನ್ನು ಬಾಧಿಸಿರುವ ನೀತಿಯೊಂದರ ವಿಚಾರವನ್ನು ಸಂಪೂರ್ಣ ಪರಾಮರ್ಶಿಸಲು ವಿಫಲರಾಗಿದ್ದಾರೆಂಬುದು ಸ್ಪಷ್ಟ.

ತಮ್ಮ ನವೆಂಬರ್ 8ರ ಭಾಷಣದಲ್ಲಿ ಮೋದಿ ಕಾಳಧನ ಹಾಗೂ ನಕಲಿ ನೋಟು ನಿರ್ಮೂಲನೆಯನ್ನು ಕ್ರಮವಾಗಿ 18 ಹಾಗೂ ಐದು ಬಾರಿ ಉಲ್ಲೇಖಿಸಿದ್ದರಲ್ಲದೆ ನೋಟು ಅಮಾನ್ಯದ ಉದ್ದೇಶವೇ ಕಾಳಧನ ಹಾಗೂ ನಕಲಿ ನೋಟುಗಳ ನಿರ್ಮೂಲನೆ ಎಂದು ಸಾರಿದ್ದರು. ಈ ಭಾಷಣದಲ್ಲಿ ಅವರು ಒಮ್ಮೆಯೂ  ಡಿಜಿಟಲ್/ಕ್ಯಾಶ್ ಲೆಸ್ ಉಲ್ಲೇಖ ಮಾಡಿರಲಿಲ್ಲ.

ಆದರೆ ಅವರು ನಂತರ  ಭಾಷಣ ಮಾಡಿದ ರ್ಯಾಲಿಗಳಲ್ಲಿ ನಕಲಿ ನೋಟು ಹಾಗೂ ಕಾಳಧನದ ಬಗೆಗಿನ ಉಲ್ಲೇಖ ಕಡಿಮೆಯಾಗತೊಡಗಿ ಲೆಸ್ ಕ್ಯಾಶ್ ಇಕಾನಮಿ ಹಾಗೂ ಡಿಜಿಟಲ್ ಟ್ರಾನ್ಸಾಕ್ಷನ್ ಮಾಡಿದವರಿಗೆ ಡ್ರಾ ಮೂಲಕ ಬಹುಮಾನಗಳ ಬಗೆಗೆ ಮಾತನಾಡಿದ್ದಾರೆ.

ಆರಂಭದ ಭಾಷಣಗಳಲ್ಲಿ `50 ದಿನಗಳ ನೋವು’ ಕಳೆದ ಬಳಿಕ ನಲಿವಿನ ಬಗ್ಗೆ ಮಾತನಾಡಿದ್ದರು.  ನವೆಂಬರ್ 13ರಂದು ಬೆಳಗಾವಿಯಲ್ಲಿ ಮಾತನಾಡುತ್ತಾ  ತಾವು ಉಲ್ಲೇಖಿಸಿದ್ದ 50 ದಿನÀಗಳು ಡಿಸೆಂಬರ್ 30ರಂದು ಕೊನೆಗೊಳ್ಳುವುದರ ಬಗ್ಗೆಯೂ ಹೇಳಿದ್ದರಲ್ಲದೆ ಅಮಾನ್ಯೀಕರಣದಿಂದಾಗಿ ಉತ್ತಮ ಶಿಕ್ಷಣ, ಹಿರಿಯ ನಾಗರಿಕರಿಗೆ ಕಡಿಮೆ ಬೆಲೆಗಳಲ್ಲಿ ಔಷಧಿಗಳು ಹಾಗೂ ಯುವಜನತೆಗೆ ಹೆಚ್ಚಿನ ಉದ್ಯೋಗ ದೊರಕುವುದೆಂದು ಹೇಳಿದ್ದರು.

ಆಗ್ರಾದಲ್ಲಿ ನವೆಂಬರ್ 30ರಂದು ಮಾತನಾಡಿದ ಮೋದಿ, ಬ್ಯಾಂಕುಗಳು ಅಮಾನ್ಯಗೊಂಡ ನೋಟುಗಳ ರೂಪದಲ್ಲಿ ರೂ 5 ಲಕ್ಷ ಕೋಟಿ ಹಣ ಪಡೆದಿದೆಯೆಂದರಲ್ಲದೆ ಬ್ಯಾಂಕುಗಳು ಶೀಘ್ರದಲ್ಲಿಯೇ ಕಡಿಮೆ ಬಡ್ಡಿ ದರದಲ್ಲಿ, ಮುಖ್ಯವಾಗಿ ಬಡವರಿಗೆ ಸಾಲ ನೀಡುವುದಾಗಿಯೂ  ಘೋಷಿಸಿದರು. ಆದರೆ ಇತ್ತೀಚಿಗಿನ ಡೆಹ್ರಾಡೂನ್ ಅಥವಾ ವಾರಣಾಸಿ ಭಾಷಣಗಳಲ್ಲಿ 50 ದಿನಗಳ ನಂತರದ ಲಾಭಗಳ ಬಗ್ಗೆ ಉಲ್ಲೇಖವೇ ಇಲ್ಲ. ಅದರ ಬದಲು 50 ದಿನಗಳ ನಂತರ `ನೋವು’ ಹೇಗೆ ಕಡಿಮೆಯಾಗುವುದು ಎಂಬುದನ್ನು  ಅವರು ವಿವರಿಸಿದ್ದರು.

ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ವಿಚಾರದಲ್ಲಿಯೂ ಮೋದಿಯ ಹೇಳಿಕೆಗಳಲ್ಲಿ ದೃಢತೆಯಿಲ್ಲವಾಗಿದೆ. ರಾಜಕೀಯ ಪಕ್ಷಗಳು ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸಬಹುದೆಂದು ಸರಕಾರ ಆರಂಭದಲ್ಲಿ ಹೇಳಿದರೂ ನಂತರ ಟೀಕೆಗಳಿಗೆ ಬೆದರಿ ಅದನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಡಿಸೆಂಬರ್ 20ರಂದು ಕಾನ್ಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ರಾಜಕೀಯ ಪಕ್ಷಗಳಿಗೆ ದೊರೆಯುವ ಅನಾಮಿಕ ದೇಣಿಗೆಗಳ ಮಿತಿಯನ್ನು ರೂ 2000ಕ್ಕೆ ನಿಗದಿ ಪಡಿಸಲು ಚುನಾವಣಾ ಆಯೋಗ ನೀಡಿದ ಸಲಹೆಯನ್ನು ಅವರು ಸ್ವಾಗತಿಸಿದ್ದರು. ಆದರೆ ಇತರ ರಾಕೀಯ ಪಕ್ಷಗಳೂ ಈ ಸಲಹೆಯನ್ನು ಸ್ವಾಗತಿಸಿದ್ದೇ ತಡ ಮೋದಿಗೆ ಈ ಬಗೆಗಿನ ಆಸಕ್ತಿ ಇಲ್ಲವಾಗಿಬಿಟ್ಟಿತು.

ಇಲ್ಲಿಯತನಕ ಹೆಚ್ಚಿನವರು ಮೋದಿ ನೀಡಿದ ಆಶ್ವಾಸನೆಗಳಲ್ಲಿ ನಂಬಿಕೆಯಿರಿಸಿದ್ದಾರೆ. ಈ ನಂಬಿಕೆ ಉಳಿಸಿಕೊಳ್ಳುವ ಸಲುವಾಗಿ ಮೋದಿ ಇನ್ನೊಂದು ದೊಡ್ಡ ಯೋಜನೆ ಹಾಕಿಕೊಳ್ಳುವರೇ ಎಂದು ಕಾದು  ನೋಡಬೇಕು.