ಕರಾಳ ಶಾಸನಗಳ ನಾಡಿನಲ್ಲಿ ಚಿಂತನೆಗಳೂ ಅಪರಾಧವಾದಾಗ

ಒಂದು ನಿರ್ದಿಷ್ಟ ಸಾಹಿತ್ಯವನ್ನು ಹೊಂದಿರುವುದೇ ಅಪರಾಧ ಎಂದಾಗುವುದಾದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಮುಂಬೈ ಹೈಕೋರ್ಟ್ ಹೇಳಿತ್ತು. ಆದರೆ ಇಂದು ಮತ್ತೊಂದು ಕೋರ್ಟ್ ಇದೇ ವಿಕೃತಿಯನ್ನು ಪ್ರದರ್ಶಿಸಿರುವುದು ವಿಪರ್ಯಾಸವಷ್ಟೆ.

ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ 48 ವರ್ಷದ ಗೋಕಲಕೊಂಡ ನಾಗ ಸಾಯಿಬಾಬಾ ಬೆನ್ನು ಹುರಿಯ ನೋವಿನಿಂದ ಬಳಲುತ್ತಿದ್ದು ಅವರ ಮಾಂಸಖಂಡ ಮತ್ತು ನರಗಳು ಶಿಥಿಲವಾಗಿವೆ. ನಡೆಯಲಾಗದ ಸಾಯಿಬಾಬಾ ಅವರಿಗೆ ಎಡಗೈ ಬಳಸುವುದು ಸಾಧ್ಯವೇ ಇಲ್ಲ. ಅವರ ಪಕ್ಕೆಲಬುಗಳು ಶ್ವಾಸಕೋಶದೊಳಗೆ ಕುಸಿಯುತ್ತಿವೆ. ಶೇ 90ರಷ್ಟು ವಿಕಲಾಂಗರಾಗಿರುವ ಸಾಯಿಬಾಬಾ ತಮ್ಮ ಆರೋಗ್ಯ ಕ್ಷೀಣಿಸದಿರುವಂತೆ ನೋಡಿಕೊಳ್ಳಬೇಕಾದರೆ ನಿರಂತರ ಚಿಕಿತ್ಸೆ ಅನಿವಾರ್ಯ. ಇಲ್ಲವಾದರೆ ಅವರ ಜೀವಕ್ಕೇ ಸಂಚಕಾರ ಖಚಿತ. ಆದರೆ ಇಂತಹ ಅಸಹಾಯಕ ವ್ಯಕ್ತಿಯೊಬ್ಬರನ್ನು ಭಯೋತ್ಪಾದನೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ನೋಡಿದರೆ ನಾವು ಬದುಕುತ್ತಿರುವ ಈ ಸಮಾಜ ಮತ್ತು ಪ್ರಪಂಚ ಎಷ್ಟು ಕ್ರೂರ ಎಂದು ಭಾಸವಾಗುತ್ತದೆ.
ನಡೆಯಲಾಗದ, ಚಲನೆಯನ್ನೇ ಕಳೆದುಕೊಂಡಿರುವ ವ್ಯಕ್ತಿಯೊಬ್ಬ ಭಯೋತ್ಪಾದಕನಾಗುವುದೆಂದರೆ ಹೇಗೆ ? ಭಯೋತ್ಪಾದಕ ಕೃತ್ಯ ಎಂದರೆ ಜೀವ ಹಾನಿ ಮಾಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವುದು ಇತ್ಯಾದಿ. ಆದರೆ ಸಾಯಿಬಾಬಾ ಈ ರೀತಿಯ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಸಾಧ್ಯ. ?
ಸಾಯಿಬಾಬಾ ಒಬ್ಬ ಮಾವೋವಾದಿ ಎಂದು ನ್ಯಾಯಾಲಯ ಹೇಳಿದೆ. 1967ರ ನಕ್ಸಲಬಾರಿ ದಂಗೆಯನ್ನು ಸಾಯಿಬಾಬ ವೈಭವೀಕರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅವರ ಲ್ಯಾಪಟಾಪಿನಲ್ಲಿ ಈ ಕುರಿತ ವಿಚಾರಧಾರೆಯ ಸಾಹಿತ್ಯ ಇರುವುದನ್ನೇ ಸಾಕ್ಷಿ ಎಂದು ಪರಿಗಣಿಸಿ ಸಾಯಿಬಾಬಾ ನಿಷೇಧಿತ ಮಾವೋವಾದಿ ಪಕ್ಷದೊಡನೆ ಸಂಪರ್ಕ ಹೊಂದಿದ್ದಾರೆ ಎಂದು ಭಾವಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಪ್ರಭುತ್ವ ಒಬ್ಬ ವ್ಯಕ್ತಿಯ ಮನದಾಳದಲ್ಲಿ ಹೊಕ್ಕು ಆತನ ಸಿದ್ಧಾಂತವನ್ನು ಗ್ರಹಿಸುವ ನಿಟ್ಟಿನಲ್ಲಿ ಸಾಗಿದೆ ಎಂದು ಸಾಯಿಬಾಬಾ ಪರ ವಕೀಲ ಜಾನ್ ಹೇಳಿದ್ದಾರೆ. ಬಹುಪಾಲು ನ್ಯಾಯ ವ್ಯವಸ್ಥೆಗಳಲ್ಲಿ ಕ್ರಿಯೆಯನ್ನು ಮಾತ್ರವೇ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಚಿಂತನೆಗಳನ್ನಲ್ಲ. ಈವರೆಗೂ ಇದೇ ನಿಯಮ ಪಾಲಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ನ್ಯಾಯವ್ಯವಸ್ಥೆಗಳು ಕೆಲವು ಚಿಂತನೆಗಳನ್ನೇ ಅಪರಾದ ಎಂದು ಪರಿಗಣಿಸುತ್ತಿವೆ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ.
1967ರಲ್ಲಿ, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಯುಎಪಿಎ ಶಾಸನ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಶಾಸನವಾಗಿದÀ್ದು ಮುಕ್ತ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದೇ ಅಲ್ಲದೆ ಮುಕ್ತವಾಗಿ ಗುಂಪು ಸೇರುವ ಹಕ್ಕುಗಳನ್ನೂ ಕಸಿದುಕೊಂಡಿತ್ತು. 2008ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಮುಂಬೈ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಈ ಕಾಯ್ದೆಯ ವ್ಯಾಪ್ತಿಯನ್ನು ಹೆಚ್ಚಿಸಿತ್ತು. 2012ರಲ್ಲಿ ಕಾಯ್ದೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿತ್ತು. ಪ್ರಸ್ತುತ ರೂಪದಲ್ಲಿ ಈ ಶಾಸನ ಪ್ರಭುತ್ವಕ್ಕೆ ಜನರನ್ನು ಚಿತ್ರಹಿಂಸೆಗೊಳಪಡಿಸಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಯುಎಪಿಯ ಕಾಯ್ದೆಯ ಅನುಸಾರ ಯಾವುದೇ ವ್ಯಕ್ತಿ ಭಾರತದಲ್ಲಿ ಅಥವಾ ವಿದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಸರಬರಾಜಿಗೆ ಅಡ್ಡಿಪಡಿಸಿದರೆ ಅದು ಭಯೋತ್ಪಾದಕ ಕೃತ್ಯವಾಗುತ್ತದೆ. ಇಂತಹ ಕರಾಳ ಶಾಸನದ ಪರಿಣಾಮವಾಗಿಯೇ ಪೊಲೀಸರು ಖೈದಿಗಳಿಗೆ ಚಿತ್ರಹಿಂಸೆ ನೀಡಲು ಪರಮಾಧಿಕಾರ ಪಡೆದಿದ್ದಾರೆ. ನಮ್ಮ ನ್ಯಾಯವ್ಯವಸ್ಥೆಯಲ್ಲಿ ಅಪರಾಧ ಸಾಬೀತಾಗುವವರೆಗೂ ಆರೋಪಿ ನಿರಪರಾಧಿ ಎಂದೇ ಪರಿಗಣಿಸಲಾಗುತ್ತದೆ. ಆದರೆ ಯುಎಪಿಎ ಈ ನಿಯಮಕ್ಕೆ ವ್ಯತಿರಿಕ್ತವಾಗಿದೆ.
ಯುಎಪಿಎ ಕಾಯ್ದೆಯಡಿ ಸರ್ಕಾರ ಯಾವುದೇ ಸಂಘಟನೆಯನ್ನು ವಿನಾಕಾರಣ ನಿಷೇಧಿಸಬಹುದು. ಹಾಗಾಗಿ ನಿಷೇಧಿತ ಸಂಘಟನೆಗೆ ಈ ಕ್ರಮದ ಹಿಂದಿನ ಉದ್ದೇಶವೇ ಅರಿವಾಗದೆ ನ್ಯಾಯಾಲಯದಲ್ಲಿ ಹೋರಾಡುವುದು ದುಸ್ತರವಾಗುತ್ತದೆ. 2012ರ ತಿದ್ದುಪಡಿಯ ನಂತರ ಈ ಕಾಯ್ದೆಯಡಿ ಒಬ್ಬ ವ್ಯಕ್ತಿ ಎಂದರೆ ವ್ಯಕ್ತಿಗಳ ಗುಂಪು ಸಹ ಆಗುತ್ತದೆ. ಹಾಗಾಗಿ ಮತ್ತೊಬ್ಬ ಆರೋಪಿಯೊಡನೆ ಸಂಪರ್ಕ ಹೊಂದಿರುವುದೇ ಅಪರಾಧವಾಗಿಬಿಡುತ್ತದೆ. ಇಂತಹ ಕರಾಳ ಶಾಸನಗಳ ಬಲದಿಂದಲೇ ಇಂದು ಪ್ರಭುತ್ವ ಪ್ರತಿರೋಧದ ದನಿಗಳನ್ನು ವ್ಯವಸ್ಥಿತವಾಗಿ ದಮನಿಸುತ್ತಿದೆ. ಸಾಯಿಬಾಬಾ ಸರ್ಕಾರದ ನೀತಿಗಳ ವಿರುದ್ಧ ಉಗ್ರ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದರು. ಆದಿವಾಸಿಗಳ ಅಭಿವೃದ್ಧಿಯಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸುತ್ತಿದ್ದರು. ಹಾಗಾಗಿ ಸಾಯಿಬಾಬಾ ಇಂದು ಭಯೋತ್ಪಾದಕನಂತೆ ಕಾಣುತ್ತಿದ್ದಾರೆ. 2011ರಲ್ಲಿ ನಿಷೇಧಿತ ಮಾವೋವಾದಿ ಪಕ್ಷದ ಸಾಹಿತ್ಯ ಹೊಂದಿದ್ದ ಅರೋಪದ ಮೇಲೆ ಮಹಾರಾಷ್ಟ್ರ ಸರ್ಕಾರ ಜ್ಯೋತಿ ಚೊರ್ಗೆ ಅವರನ್ನು ಬಂಧಿಸಿತ್ತು. ಒಂದು ನಿರ್ದಿಷ್ಟ ಸಾಹಿತ್ಯವನ್ನು ಹೊಂದಿರುವುದೇ ಅಪರಾಧ ಎಂದಾಗುವುದಾದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಮುಂಬೈ ಹೈಕೋರ್ಟ್ ಹೇಳಿತ್ತು. ಆದರೆ ಇಂದು ಮತ್ತೊಂದು ಕೋರ್ಟ್ ಇದೇ ವಿಕೃತಿಯನ್ನು ಪ್ರದರ್ಶಿಸಿರುವುದು ವಿಪರ್ಯಾಸವಷ್ಟೆ. (ಕೃಪೆ : ಸ್ಕ್ರೋಲ್)