ತಾರತಮ್ಯವಿಲ್ಲದ ಸಮಾನ ನಾಗರಿಕ ಸಂಹಿತೆ ಹಿಂದೂಗಳಿಗೂ ಅಪಥ್ಯವೇ

ಎಲ್ಲ ವೈಯ್ಯಕ್ತಿಕ ಕಾನೂನುಗಳ ತಾರತಮ್ಯಯುತ ನಿಯಮಗಳನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿ ತರುವುದು ಅತ್ಯಗತ್ಯ.

ವಿಶ್ಲೇಷಣೆ

ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕಾನೂನು ಆಯೋಗಕ್ಕೆ ಬರೆದ ಪತ್ರವೊಂದರಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದರೆ ಉಂಟಾಗುವ ಪರಿಣಾಮವನ್ನು ಕುರಿತು ಮಾಹಿತಿ ಕೋರಿತ್ತು. ನಂತರ ಕಾನೂನು ಆಯೋಗ ಈ ಸಂಹಿತೆಯನ್ನು ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿತ್ತು. ನಿರೀಕ್ಷೆಯಂತೆ ಅಲ್ಪಸಂಖ್ಯಾತ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಸಮಾನ ನಾಗರಿಕ ಸಂಹಿತೆಯಿಂದ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಭಾವಿಸಿದ್ದವು.

ಪ್ರಸ್ತುತ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಎರಡು ಪ್ರಮುಖ ಕಾರಣಗಳನ್ನು ನೀಡಲಾಗುತ್ತಿದೆ. ಒಂದು ಸೆಕ್ಯುಲರ್ ಗಣತಂತ್ರ ವ್ಯವಸ್ಥೆಯಲ್ಲಿ ಧರ್ಮ ಯಾವುದೇ ಇದ್ದರೂ ಪ್ರತಿಯೊಬ್ಬರೂ ಒಂದು ಸಮಾನ ಕಾನೂನು ಸಂಹಿತೆಗೆ ಒಳಪಡಬೇಕು.  ಎರಡನೆಯದಾಗಿ ಲಿಂಗ ಸಮಾನತೆಯನ್ನು ಸಾಧಿಸಲು ಇದು ಅತ್ಯಗತ್ಯ. ಏಕೆಂದರೆ ಬಹುತೇಕ ಧರ್ಮಗಳ ವೈಯ್ಯಕ್ತಿಕ ಕಾನೂನುಗಳು ಮಹಿಳೆಯರ ವಿರುದ್ಧ ತಾರತಮ್ಯ ಹೊಂದಿರುತ್ತವೆ. ಎರಡನೆಯ ಕಾರಣ ತರ್ಕಬದ್ಧ ಎನಿಸಿದರೂ ಮೊದಲನೆಯ ಕಾರಣ ಚರ್ಚಾಸ್ಪದ.

ಸಮಾನ ನಾಗರಿಕ ಸಂಹಿತೆಯ ಮೂಲ ಉದ್ದೇಶ ಕಾನೂನಿನ ದೃಷ್ಟಿಯಲ್ಲಿ ಸಮಾನತೆಯನ್ನು ಸಾಧಿಸುವುದಾಗಿರುತ್ತದೆ. ಆದರೆ ಒಂದೇ ನಿಯಮಗಳನ್ನು ನಾಗರಿಕ ವಿಚಾರಗಳಲ್ಲಿ ಅಳವಡಿಸುವುದು ಒಪ್ಪುವಂತಹುದಲ್ಲ. ನಾಗರಿಕ ಸಂಹಿತೆ ಎಂದರೆ ಜನಸಮುದಾಯಗಳ ವಿವಾಹ, ವಿಚ್ಚೇದನ, ದತ್ತು ಪಡೆಯುವುದು, ಉತ್ತರಾಧಿಕಾರ ಮತ್ತು ವಂಶಪಾರಂಪರ್ಯತೆ ಮುಂತಾದವುಗಳನ್ನು ನಿಯಂತ್ರಿಸುವ ಒಂದು ಕಾನೂನು ಚೌಕಟ್ಟು. ಕೆಲವು ವಿಚಾರಗಳು ಸರ್ಕಾರದ ಹಸ್ತಕ್ಷೇಪದಿಂದ ಹೊರತಾಗಿ ವೈಯ್ಯಕ್ತಿಕ ಆಯ್ಕೆಗೆ ಸಂಬಂಧಿಸಿರುತ್ತದೆ. ಪ್ರಸ್ತುತ ಭಾರತದಲ್ಲಿ ವಿವಿಧ ಧರ್ಮಗಳಿಗೆ ವಿವಿಧ ವೈಯ್ಯಕ್ತಿಕ ಕಾನೂನು ಅನ್ವಯಿಸುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ವಿಚಾರ ಮಾಡದೆ ಇರುವ ಅಂಶವೆಂದರೆ ಭಾರತದಂತಹ ವೈವಿಧ್ಯಮಯ ಮತ್ತು ಬೃಹತ್ ರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆ ಸೂಕ್ತ ಎನಿಸುವುದಿಲ್ಲ. ಉತ್ತರಾಧಿಕಾರ, ವಿಚ್ಚೇದನಾನಂತರದ ಪರಿಹಾರ ಮುಂತಾದ ವಿಚಾರಗಳನ್ನು ನಿಯಮಗಳಿಗೆ ಒಳಪಡಿಸಬಹುದು. ಆದರೆ ವಿವಾಹ ಮತ್ತು ವಿಚ್ಚೇದನದಂತಹ ವಿಚಾರಗಳಲ್ಲಿ ಎಚ್ಚರ ವಹಿಸಬೇಕಾಗುತ್ತದೆ.

ಹಿಂದೂ ವಿವಾಹ ಪದ್ಧತಿಯಲ್ಲಿ ಸಪ್ತಪದಿ ಬಹಳ ಮುಖ್ಯವಿಧಾನವಾಗಿದ್ದು ಸಪ್ತಪದಿಯೇ ವಿವಾಹ ಬಂಧನಕ್ಕೆ ಸಂಕೇತವಾಗುತ್ತದೆ. ಆದರೆ ಕ್ರೈಸ್ತ ವಿವಾಹ ಪದ್ಧತಿ ಭಿನ್ನವಾಗಿರುತ್ತದೆ. ಗಂಡು ಹೆಣ್ಣು ಉಂಗುರ ಬದಲಾಯಿಸುವ ಮೂಲಕ ವಿವಾಹ ನೆರವೇರಿಸಲಾಗುತ್ತದೆ. ಇಂತಹ ವಿಚಾರಗಳಲ್ಲಿ ಸಮಾನ ನಾಗರಿಕ ಸಂಹಿತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ?  ಹಿಂದೂಯೇತರ ಸಮುದಾಯಗಳಿಗೂ ಸಪ್ತಪದಿಯನ್ನು ಕಡ್ಡಾಯ ಮಾಡಲು ಸಾಧ್ಯವೇ ?  ಸಮಾನ ನಾಗರಿಕ ಸಂಹಿತೆಗಾಗಿ ಆಗ್ರಹಿಸುವ ಮುನ್ನ ಸಮಾನತೆ ಮತ್ತು ಏಕರೂಪತೆಯ ನಡುವಿನ ವ್ಯತ್ಯಾಸವನ್ನು ಗ್ರಹಿಸುವುದು ಅಗತ್ಯ.  ಧರ್ಮ, ಜಾತಿ ಮತ್ತು ಲಿಂಗ ಬದಿಗಿಟ್ಟು ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣುವುದು ಪ್ರಭುತ್ವದ ಕರ್ತವ್ಯ.  ಅಂದರೆ ಸಕಲ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡುವುದೇ ಅಲ್ಲದೆ ಪ್ರಭುತ್ವ  ಯಾವುದೇ ರೀತಿಯ ತಾರತಮ್ಯ ನಡೆಯದಂತೆ ಎಚ್ಚರ ವಹಿಸಬೇಕಾಗುತ್ತದೆ.  ಆದರೆ ವೈಯ್ಯೆಕ್ತಿಕ ವಿಚಾರಗಳಲ್ಲಿ ಏಕರೂಪ ನಿಯಮವನ್ನು  ಜಾರಿಗೊಳಿಸಲು ಸಾಧ್ಯವೇ ? ಇಲ್ಲ ಎನ್ನಲು ಅಡ್ಡಿಯಿಲ್ಲ.

ವಾಸ್ತವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಲಿಂಗ ನ್ಯಾಯಕ್ಕಗಿ ಶ್ರಮಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಈಗ ಜಾರಿಯಲ್ಲಿರುವ ವಿವಿಧ ವೈಯ್ಯಕ್ತಿಕ ಕಾನೂನುಗಳು ಯಾವುದೇ ರೀತಿಯ ತಾರತಮ್ಯ ಇಲ್ಲದೆ ಎಚ್ಚರ ವಹಿಸುವುದು ಸರ್ಕಾರದ ಕರ್ತವ್ಯ. ಮುಖ್ಯವಾಗಿ ಲಿಂಗ ತಾರತಮ್ಯ ಇಲ್ಲದ ರೀತಿಯಲ್ಲಿ ಈ ಕಾನೂನುಗಳನ್ನು ಜಾರಿಗೊಳಿಸಬಹುದು. ಎಲ್ಲ ವೈಯ್ಯಕ್ತಿಕ ಕಾನೂನುಗಳ ತಾರತಮ್ಯಯುತ ನಿಯಮಗಳನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿ ತರುವುದು ಅತ್ಯಗತ್ಯ.