ವಾರ ಸಮೀಪಿಸಿದರೂ ಪತ್ತೆಯಾಗದ ಎಟಿಎಂ ಕಳ್ಳರು : ತೀವ್ರ ತನಿಖೆ

ನಮ್ಮ ಪ್ರತಿನಿಧಿ ವರದಿ
ಶಿರಸಿ : ಜಿಲ್ಲೆಯ ಇತಿಹಾಸದಲ್ಲೇ ಪ್ರಥಮವಾದ ಐಸಿಐಸಿಐ ಬ್ಯಾಂಕಿನ ಎಟಿಎಂ ಒಡೆದು 13.80 ಲಕ್ಷ ರೂ ಮೀರಿ ನಗದು ಕಳ್ಳತನ ಮಾಡಿದ ಪ್ರಕರಣ ವಾರ ಸಮೀಪಿಸಿದರೂ ಪತ್ತೆಯಾಗಿಲ್ಲ. ವಿವಿಧ ಅಂಶಗಳ ಆಧರಿಸಿ, ಎಲ್ಲ ಹಂತದ ತನಿಖೆಯನ್ನು ಶಿರಸಿ ಪೊಲೀಸರು ಮುಂದುವರಿಸಿದ್ದಾರೆ.
ಹೊಸಪೇಟೆ ರಸ್ತೆಯ ಐಸಿಐಸಿಐ ಬ್ಯಾಂಕಿನ ಎಟಿಎಂಗೆ ರವಿವಾರ ಮಧ್ಯರಾತ್ರಿ ಸುಮಾರು 2.10 ಗಂಟೆ ನಂತರ ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 13.80 ಲಕ್ಷ ರೂ ಮೀರಿ ಒಯ್ದಿದ್ದರು. ಬ್ಯಾಂಕಿನ ಸೀಸಿ ಟೀವಿ ಹಾಗೂ ರಸ್ತೆ ಇನ್ನೊಂದು ಬದಿ ಇರುವ 2 ಬ್ಯಾಂಕುಗಳ ಸೀಸಿ ಟೀವಿಯಲ್ಲೂ ಕಳ್ಳತನ ಸ್ವಲ್ಪ ತುಣುಕು ದಾಖಲಾದ ಮಾಹಿತಿ ಲಭ್ಯವಾಗಿತ್ತು. ಕುಮಟಾ ರಸ್ತೆಯ ಜಾನ್ಮನೆಯಲ್ಲಿರುವ ಹಾಗೂ ಕಾಲೇಜು ರಸ್ತೆಯ ಕೆನರಾ ಬ್ಯಾಂಕಿನ ಎಟಿಎಂ ಕಳ್ಳತನದ ವಿಫಲ ಯತ್ನವನ್ನು ಕಳ್ಳರು ಮಾಡಿದ್ದರು.
ಎಸ್ಪಿ ವಿನಾಯಕರಾವ್ ಪಾಟೀಲ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಹೋಗಿದ್ದಾರೆ. ಡಿವೈಎಸ್ಪಿ ನಾಗೇಶ ಶೆಟ್ಟಿ ನೇತೃತ್ವದಲ್ಲಿ ಪೊಲಿಸ್ ತಂಡ, ಸಿಪಿಐ ಕೃಷ್ಣಾನಂದ ನೇತೃತ್ವದ ಇನ್ನೊಂದು ತಂಡ ಪ್ರತ್ಯೇಕವಾಗಿ ತನಿಖೆ ಚುರುಕುಗೊಳಿಸಿದೆ. ವಿವಿಧ ಮಾಹಿತಿ ಆಧರಿಸಿ, ಐದಾರು ದಿನಗಳಿಂದ ಪರಿಶೀಲನೆ ಮುಂದುವರಿಸಿದ್ದಾರೆ. ಸದ್ಯದವರೆಗೂ ಕಳ್ಳರು ಪತ್ತೆಯಾಗಿಲ್ಲ.