4 ಸಾವಿರ ಕಾರ್ಯಕರ್ತೆಯರ ಜತೆ ಕೊಲ್ಲೂರಿಗೆ ಈಶ್ವರಪ್ಪ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ: ಬಿಜೆಪಿಯ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ವಿರುದ್ಧ ಮತ್ತೆ ತೊಡೆ ತಟ್ಟಲಾರಂಬಿಸಿರುವ  ಮಾಜೀ ಸಚಿವ ಈಶ್ವರಪ್ಪ ತನ್ನ ಬಳಿಯೂ ಜನಬಲ ಇದೆ ಎನ್ನುವುದನ್ನು ಈ ಬಾರಿ ಬಹಿರಂಗವಾಗಿ ಸಾಬೀತುಪಡಿಸುವ ಮೂಲಕ ಪಕ್ಷದ ಗಮನೆ ಸೆಳೆಯಲು ಸಿದ್ಧರಾಗಿದ್ದಾರೆ.

ತಾನು ನಡೆಸುತ್ತಿರುವ ಮೈಕ್ರೋ ಪೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ  ಸುಮಾರು ನಾಲ್ಕು ಸಾವಿರ ಮಹಿಳೆಯರನ್ನು ಈಶ್ವರಪ್ಪ ತೀರ್ಥಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಆ ಮೂಲಕ ಶಿವಮೊಗ್ಗದಲ್ಲಿ ಈಶ್ವರಪ್ಪ ಸಬಲರಾಗಿದ್ದಾರೆ ಮತ್ತು ಯಡಿಯೂರಪ್ಪನವರಿಗೆ ತಿರುಗೇಟು ನೀಡಲು ಸಿದ್ಧರಾಗಿದ್ದಾರೆ ಎಂಬ ಸೂಚನೆಯನ್ನು ಬಿಜೆಪಿ ಹೈಕಮಾಂಡಿಗೆ ರವಾನಿಸಿದ್ದಾರೆ.

ಶನಿವಾರ ರಾತ್ರಿಯೇ ಕೊಲ್ಲೂರಿಗೆ ಆಗಮಿಸಿದ್ದ ಈಶ್ವರಪ್ಪ ಕುಟುಂಬ ಹಾಗೂ ಮೈಕ್ರೋ ಪೈನಾನ್ಸ್ ಮಹಿಳಾ ಸದಸ್ಯರು ರಾತ್ರಿಯೂ ಮೂಕಾಂಬಿಕೆಗೆ ಪುಜೆ ಸಲ್ಲಿಸಿದ್ದಲ್ಲದೇ ಭಾನುವಾರ ಬೆಳಿಗ್ಗೆ ಆರು ಗಂಟೆಗೇ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಆಗಮಿಸಿದ್ದರು. ನಂತರ ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ನೇತೃತ್ವದಲ್ಲಿ ಚಂಡಿಕಾಯಾಗ ನೆರವೇರಿತು.

ಚಂಡಿಕಾಯಾಗ ಹಾಗೂ ಪೂರ್ಣಾಹುತಿ ಮುಗಿದ ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಅವರಿಂದ ಗೌರವ ಸ್ವೀಕರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮಾರಿಕಾಂಬಾ ಮೈಕ್ರೋ ಪೈನಾನ್ಸ್ ವತಿಯಿಂದ ಹತ್ತು ಸಾವಿರ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಉಚಿತ ಸೇವೆ ನೀಡಲಾಗಿದೆ. ಈ ಬಾರಿ ತೀರ್ಥ ಕೇತ್ರಗಳ ಪರ್ಯಟನೆಗೆ ಯೋಜನೆ ಹಾಕಿಕೊಂಡಿದ್ದು, ಅದರಂತೆ ಬನವಾಸಿಯಿಂದ ತೀರ್ಥ ಕ್ಷೇತ್ರಗಳ ಪ್ರವಾಸ ಆರಂಭವಾಗಿದೆ. ನಂತರ ಸಿರ್ಸಿ ಮಾರಿಕಾಂಬಾ ದೇವಿ ದರ್ಶನ, ನಂತರ ಮುರ್ಡೇಶ್ವರ ಮುಗಿಸಿ ಕೊಲ್ಲೂರಿಗೆ ಆಗಮಿಸಲಾಗಿದೆ. ನಂತರ ಆನೆಗುಡ್ಡೆ ಗಣಪತಿ ದೇವಸ್ಥಾನ ದರ್ಶನ ನಡೆಸಿ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಾಗುತ್ತಿದೆ. ಶ್ರೀಕೃಷ್ಣನ ದರ್ಶನ ಮುಗಿದ ಬಳಿಕ ಪೇಜಾವರ ಶ್ರೀಗಳಿಂದ ರಾಜಾಂಗಣದಲ್ಲಿ ಆಶೀರ್ವಚನ ಸ್ವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೊಲ್ಲೂರು ದೇವಸ್ಥಾನಕ್ಕೆ ಬಿಜೆಪಿ ಸರ್ಕಾರವಿದ್ದಾಗ ಅಭಿವೃದ್ಧಿಗೆ ಒತ್ತು ನೀಡಾಗಿತ್ತು. ಆದರೆ ನಂತರದ ದಿನಗಳಲ್ಲಿ ಸರ್ಕಾರದ ಅನುದಾನಗಳು ಕಡಿಮೆಯಾಗಿದ್ದು, ಸಿದ್ಧರಾಮಯ್ಯ ಸರ್ಕಾರ ಸಾಧ್ಯವಾದಷ್ಟು ಅಭಿವೃದ್ಧಿಗೆ ಒತ್ತು ನೀಡಲಿ ಎಂದರು. ಒಳಚರಂಡಿ ಹಾಗೂ ಕುಡಿಯುವ ನೀರು ಮತ್ತು ಸೋಲಾರ್ ದೀಪಗಳ ಅಳವಡಿಕೆಯ ಕಾಮಗಾರಿಗಳು ಅನುಷ್ಟಾನದ ಸಮಸ್ಯೆ ಎದುರಿಸುತ್ತಿವೆ ಎನ್ನುವುದು ವಿಷಾಧನೀಯ ಎಂದರು.