ಬಿಜೆಪಿಯ ಅತೃಪ್ತರನ್ನು ತನ್ನೆಡೆ ಸೆಳೆಯಲು ಇಂದು ಅಂಕೋಲೆಗೆ ಬರಲಿದ್ದಾರೆ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಕೇಸರಿ ಪಕ್ಷದವರ ಗುದಮುರಿಗೆ ಮತ್ತೊಂದು ಮಜಲಿಗೆ

ವಿಶೇಷ ವರದಿ

ಅಂಕೋಲಾ (ಉ ಕ) : ಅಂಕೋಲಾ ಬಿಜೆಪಿಯಲ್ಲಿಯ ಆಂತರಿಕ ಗುದಮುರಿಗೆ ಈಗ ಇನ್ನೊಂದು ಮಗ್ಗಲಿಗೆ ದಾಟುತ್ತಿದ್ದು, ಇಂದು (ಭಾನುವಾರ) ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಬಿಜೆಪಿ ನಾಯಕ, ರಾಯಣ್ಣ ಬ್ರಿಗೆಡ್ ಸಂಸ್ಥಾಪಕ ಕೆ ಎಸ್ ಈಶ್ವರಪ್ಪ ಸಮ್ಮುಖದಲ್ಲಿ  ಇದಕ್ಕೊಂದು ರಂಗು ತರುವ ಪ್ರಯತ್ನ ಸಾಗಿದೆ.

ಇದು ಒಂದು ಕಡೆಯಾದರೆ ಇನ್ನೊಂದೆಡೆ ಅಂಕೋಲಾ ಬಿಜೆಪಿಯಲ್ಲಿನ ಒಂದು ಗುಂಪು ಈಶ್ವರಪ್ಪರನ್ನು ಮದುವೆಯ ನೆಪದಲ್ಲಿ ಕರೆ ತಂದು ತಮ್ಮನ್ನು ದೂರವಿಟ್ಟಿರುವ ಸಂಸದ ಅನಂತಕುಮಾರ್ ಗುಂಪಿಗೆ ಸೆಡ್ಡು ಹೊಡೆಯುವ ತಂತ್ರ ಸದ್ದಿಲ್ಲದೇ ನಡೆಸಿದ್ದಾರೆ.

ರಾಯಣ್ಣ ಯಾರು ?

ಈಗಾಗಲೇ ಬಿಜೆಪಿಯ ಮಂಡಳ ಅಧ್ಯಕ್ಷರ ಆಯ್ಕೆ ಸಂಬಂಧ ಆಗಿರುವ ಗೊಂದಲ ನಿವಾರಣೆ ಆಗಿಲ್ಲ. ಸಂಸದ ಅನಂತಕುಮಾರ್ ಹೆಗಡೆ ತಮ್ಮ ಬೆಂಬಲಿಗ ನಿತ್ಯಾನಂದ ಗಾಂವಕರರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರೆ, ಇನ್ನೊಂದು ಗುಂಪು ಇದಕ್ಕಿಂತ ಒಂದು ದಿನ ಮೊದಲು ಈ ಹುದ್ದೆಯ ಆಕಾಂಕ್ಷಿಯಾಗಿದ್ದ ಸಂಜಯ ನಾಯ್ಕರನ್ನು ಅಧ್ಯಕ್ಷರನ್ನಾಗಿ ತಾವೇ ಘೋಷಿಸಿಕೊಂಡಿದ್ದರು. ಈ ತಾಕಲಾಟ ನಡೆದೇ ಇದೆ.

ಅನಂತಕುಮಾರ್ ಪ್ರತಿಷ್ಠೆ ಬಿಟ್ಟು ತುಸು ಮೆದು ಧೋರಣೆ ಅನುಸರಿಸಿದರೆ, ಇನ್ನೊಂದು ಗುಂಪು ಹಠಕ್ಕೆ ಜೋತು ಬೀಳದೆ ಮಾತುಕತೆಗೆ ಬಂದರೆ, ಪಕ್ಷದ ಹಿರಿಯರು ಎರಡೂ ಗುಂಪನ್ನು ತಕ್ಕಡಿಯ್ಲಲಿಟ್ಟು ನ್ಯಾಯ ಒದಗಿಸಿದರೆ ಇದೇನು ಬಗೆಹರಿಯಲಾರದ ಕಗ್ಗಂಟಂತೂ ಆಗಿರಲಿಲ್ಲ.  ಆದರೆ ಮನೆ ಸುಟ್ಟರೂ ಚಿಂತೆಯಿಲ್ಲ, ಇಲಿ ಸಾಯಬೇಕು ಎನ್ನುವ ಗಾದೆಯಂತೆ, ಇಬ್ಬರೂ ಪಕ್ಷ ಹಳ್ಳ ಹಿಡಿಯುತ್ತಿದ್ದರೂ ಪ್ರತಿಷ್ಠೆಯ ಸೋಂಕು ಕಳೆದುಕೊಳ್ಳಲು ಸಿದ್ಧರಾಗುತ್ತಿಲ್ಲ !

ಈ ಹಿನ್ನೆಲೆಯಲ್ಲಿ ಅನಂತ್ ಗುಂಪು ತಮ್ಮನ್ನು ಕ್ಯಾರೇ ಮಾಡದ ಸಿಟ್ಟಿನಲ್ಲಿ ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದವರೂ ಈಗ ರಾಯಣ್ಣ ಬ್ರಿಗೇಡ್ ಮೂಲಕ ಸೆಡ್ಡು ಹೊಡೆಯಲು ಹೊರಟಿದ್ದಾರೆ. ಹಿಂದೊಮ್ಮೆ ಕಾಂಗ್ರೆಸ್ ಸೇರಿ, ಕೆಜೆಪಿಗೆ ಹೆಜ್ಜೆ ಇರಿಸಿ ಇಮೇಜ್ ಹಾಳಾಗಿದ್ದ ಘಟನಾವಳಿಗಳು ಕಣ್ಣ ಮುಂದೆ ಇದ್ದರೂ ಈ ಬ್ರಿಗೇಡಿಗಾಗಿ ಹೊರಟಿದ್ದಾರೆ.

ಅಚ್ಚರಿಯ ಸಂಗತಿಯೇನೆಂದರೆ, ತಾವು ತೆರೆಮರೆಯಲ್ಲಿ ಉಳಿದು, ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದವರನ್ನು ಹರಿಕೆಯ ಕುರಿ ಮಾಡಲಾಗುತ್ತಿದೆ. ಮಾರಿ ಜಾತ್ರೆಯ ಕುರಿಯಂತೆ ಕೆಲವರು ಬ್ರಿಗೇಡಿಗಾಗಿ ಎದೆಯುಬ್ಬಿಸಿ ನಿಂತಿದ್ದು, ಮುಂದಿನ ರಾಜಕೀಯ ಭವಿಷ್ಯದ ಮೇಲೆ ಇದು ಎಂತಹ ಪರಿಣಾಮ ಬೀರಲಿದೆ ಎನ್ನುವುದರ ಅರಿವಿಲ್ಲ. ಈ ಬಗ್ಗೆ ಅರಿವಿದ್ದವರೂ ಎಚ್ಚರಿಕೆ ನೀಡುತ್ತಿಲ್ಲ. ಉತ್ತರ ಕನ್ನಡ, ಅದರಲ್ಲೂ ಅಂಕೋಲೆಯಂತಹ ಪ್ರದೇಶದಲ್ಲಿ ರಾಯಣ್ಣ ಬ್ರಿಗೇಡ್ ಯಾವ ಮಟ್ಟದಲ್ಲಿ ಯಶಸ್ಸು ಪಡೆದೀತು ಎಂಬ ಚಿಂತನೆಯೂ ನಡೆದಿಲ್ಲ.

ಈ ಮಧ್ಯೆ ಈಶ್ವರಪ್ಪ ನೇತೃತ್ವದಲ್ಲಿ ಪಕ್ಷದ ಅಧಿಕೃತ ಸಭೆಯೊಂದನ್ನು ಸಹ ಈ ಗುಂಪು ನಡೆಸಲು ಸಿದ್ಧತೆ ನಡೆಸಿದೆ.

ಬಿಜೆಪಿಗೆ ಹಾರಿಕೊಳ್ಳಲು ಆನಂದ, ಸೈಲ್ ಪೈಪೋಟಿ

ಇನ್ನು ಮಹತ್ವದ ಬೆಳವಣಿಗೆಯೊಂದರ ಪ್ರಕಾರ ಬಿಜೆಪಿಯಲ್ಲಿದ್ದೂ ತಟಸ್ಥರಾಗಿರುವ ಆನಂದ ಅಸ್ನೋಟಿಕರ್ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರಲು ಹೊರಟಿದ್ದು, ಅವರು ಈಶ್ವರಪ್ಪ ಜೊತೆಗೆ ಮಾತುಕತೆ ನಡೆಸಲಿದ್ದಾರೆಂಬ ಮಾಹಿತಿಯಿದೆ. ಈಶ್ವರಪ್ಪರು ರಾಯಣ್ಣ ಬ್ರಿಗೇಡಿನ ಜಿಲ್ಲಾ ಹೊಣೆಗಾರಿಕೆ ಅವರಿಗೆ ರವಾನಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಈ ಮಧ್ಯೆ ಕಾಂಗ್ರೆಸ್ಸಿನಲ್ಲಿ ಹೈರಾಣಾಗಿರುವ ಶಾಸಕ ಸತೀಶ ಸೈಲ್ ಸಹ ಬಿಜೆಪಿಗೆ ಬರಲು ನೋಡುತ್ತಿದ್ದು, ಈಗ ಆನಂದ್ ಸಕ್ರಿಯತೆ ಅವರಿಗೊಂದು ಬ್ರೇಕ್ ಹಾಕಿದಂತಾಗಲಿದೆ.