ತನಗೆ ಸಭಾಪತಿ ಹುದ್ದೆ ನೀಡುವ ಬಿಜೆಪಿಯ ಯೋಜನೆಯನ್ನು ತಲೆಕೆಳಗಾಗಿಸಲು ಈಶು ತಂತ್ರ ?

ಈಶ್ವರಪ್ಪ

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಡಿ ಎಚ್ ಶಂಕರಮೂರ್ತಿಯವರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವ  ಬಗೆಗಿನ ತೀರ್ಮಾನವನ್ನು ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರನ್ನು ತರುವ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಡಿಯೂರಪ್ಪ ಮತ್ತವರ ಬೆಂಬಲಿಗರು ಗಂಭೀರವಾಗಿ ಯೋಚಿಸುತ್ತಿದ್ದಾರೆನ್ನಲಾಗಿದೆ.  ಈ ಮೂಲಕ ಸದ್ಯ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಯಡ್ಡಿಯೂರಪ್ಪಗೆ ಸಡ್ಡು ಹೊಡೆದು ಭಿನ್ನಮತೀಯ ನಾಯಕನೆಂದು ಗುರುತಿಸಿಕೊಂಡಿರುವ  ಈಶ್ವರಪ್ಪ ಅವರನ್ನು ಮಣಿಸುವ ಯತ್ನವನ್ನು  ಯಡ್ಡಿ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.

ಆದರೆ ವಿಧಾನಪರಿಷತ್ ಸಭಾಪತಿ ಹುದ್ದೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಬೇಕಿದ್ದಲ್ಲಿ ಜೆಡಿ(ಎಸ್) ಬೆಂಬಲ ಅನಿವಾರ್ಯವಾಗಿದೆ. ಈಗಿನ ಸಭಾಪತಿ ಶಂಕರಮೂರ್ತಿ ಜೆಡಿ(ಎಸ್) ಬೆಂಬಲದಿಂದಲೇ ಈ ಹುದ್ದೆಯಲ್ಲಿ ಮುಂದುವರಿದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆ ಹುದ್ದೆ ತನಗೆ ಬೇಕೆಂದು ಜೆಡಿ(ಎಸ್) ಹೇಳಿದಲ್ಲಿ  ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಲಿದೆ. ಅತ್ತ ಸಭಾಪತಿ ಹುದ್ದೆಗೆ ತನ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರ ಹೆಸರನ್ನು ಜೆಡಿ(ಎಸ್) ಪ್ರಸ್ತಾಪಿಸುವ ಸಂಭವವಿದೆಯೆಂದು ಹೇಳಲಾಗುತ್ತಿದ್ದು ಇದು ಬಿಜೆಪಿ ಹಾಗೂ ಜೆಡಿ(ಎಸ್) ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದೆಂದು  ಮೂಲಗಳು ತಿಳಿಸಿವೆ.

ಆದರೆ ವಿಧಾನಪರಿಷತ್ ಸಭಾಪತಿ ಸ್ಥಾನ ಪಡೆಯಲು ಈಶ್ವರಪ್ಪಗೆ ಯಾವುದೇ ಆಸಕ್ತಿಯಿಲ್ಲದೇ ಇರುವ ಕಾರಣ ಅವರು  ಬಿಜೆಪಿಯನ್ನು ಮಣಿಸುವ ಸಲುವಾಗಿ ಈ ಪ್ರಮುಖ ಹುದ್ದೆ ಹೊರಟ್ಟಿ ಅವರಿಗೇ ಹೋಗುವಂತೆ ಮಾಡಲು ತಂತ್ರ ಹೆಣೆಯುವ ಸಾಧ್ಯತೆಯಿದೆಯೆನ್ನಲಾಗುತ್ತಿದೆ.