ಈಶ್ವರಪ್ಪನ ಸ್ವಾರ್ಥ ರಾಜಕೀಯದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ : ಭೀಮಾಶಂಕರ

ಕೆ ಎಸ್ ಈಶ್ವರಪ್ಪ

ಕಾರವಾರ : “ಈಶ್ವರಪ್ಪ ಅವರು ಸ್ವಾರ್ಥ ರಾಜಕಾರಣ ಮಾಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಸಂಗೊಳ್ಳಿ ರಾಯಣ್ಣನ ಸಮಾಧಿ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಅರಿಯದ ಈಶ್ವರಪ್ಪನ ಬ್ರ್ರಿಗೇಡ್ ಸ್ಥಾಪನೆ ಮಾಡಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಕ್ಷ ನೀಡಿರುವ ಜವಾಬ್ದಾರಿ ಸ್ಥಾನವನ್ನು ಮರೆತು ಪಕ್ಷದ ಸಿದ್ಧಾಂತಗಳ ವಿರುದ್ಧ ವರ್ತಿಸುತ್ತಿದ್ದಾರೆ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ರಾಜ್ಯ ಕಾರ್ಯಕಾರಿಣಿ ಸಭೆಯ ಬಳಿಕ ಬಿಎಸ್‍ವೈ ಬ್ರಿಗೇಡ್ ಸ್ಥಾಪಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

“ಬಿ ಎಸ್ ಯಡ್ಡಿಯೂರಪ್ಪ ಪಕ್ಷ ಕಟ್ಟಲು ದಿನವಿಡೀ ಶ್ರಮಿಸುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರು ಅವರ ಬಳಿ ತೆರಳಿದರೂ ಕೂಡ ಅವರ ಕಷ್ಟ, ಸುಖವನ್ನು ವಿಚಾರಿಸುತ್ತಾರೆ. ಹೀಗಿದ್ದರೂ ಕೂಡಾ ವಿನಾಕಾರಣ ಅವರ ವಿರುದ್ಧ ಹಗೆ ಸಾಧಿಸುವ ಈಶ್ವರಪ್ಪನವರು ಈ ಹಿಂದೆ ಎಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಯಡ್ಡಿಯೂರಪ್ಪನವರ ನಾಯಕತ್ವ ಏನು ಎಂಬುದನ್ನು ಜನರಿಗೆ 2018ರ ವಿಧಾನಸಭಾ ಚುನಾವಣೆ ಬಳಿಕ ತಿಳಿಯಲಿದೆ. ಪಕ್ಷದ ಹಿರಿಯ ನಾಯಕರಾಗಿರುವ ಈಶ್ವರಪ್ಪನವರು ತಮ್ಮ ಸ್ಥಾನ, ಗೌರವ ಅರಿತು ನಡೆಯುವ ಕೆಲಸ ಮಾಡಬೇಕು” ಎಂದರು.

“ರಾಜಕೀಯ ನಿರಾಶ್ರಿತರು ಯಡ್ಡಿಯೂರಪ್ಪನವರ ವಿರುದ್ಧ ಪತ್ರ ಬರೆಯುತ್ತಿದ್ದಾರೆ. ಆದರೆ ಅದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸೋಮಣ್ಣನವರು ಇಂದು ಈ ಸ್ಥಾನದಲ್ಲಿ ನಿಲ್ಲಲು ಯಡ್ಡಿಯೂರಪ್ಪ ಕಾರಣ. ಅವರ ಋಣವನ್ನು ಈ ಜನುಮದಲ್ಲಿ ತೀರಿಸಲು ಸಾಧ್ಯವಿಲ್ಲ. ಆದರೆ ಅದೆಲ್ಲವನ್ನು ಮರೆತ ಅವರು ಬಾಯಿಗೆ ಬಂದಂತೆ ಮಾತನಾಡುತಿದ್ದಾರೆ” ಎಂದರು. ನಗರ ಘಟಕದ ಅಧ್ಯಕ್ಷ ಮನೋಜ ಭಟ್, ಎಸ್ಸಿ ಮತ್ತು ಎಸ್ಟಿ ಮೋರ್ಚಾದ ಸಾವಣ್ಣ, ನವೀನ ಅಂಕೋಲೇಕರ, ನರಸಿಂಹ ಕೋಣೇಮನೆ ಉಪಸ್ಥಿತರಿದ್ದರು.