ಧವನ್ ಸೇವೆ ಸಾಕು

ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಹಾಗೂ ಎರಡನೇ ಏಕದಿನ ಪಂದ್ಯದಲ್ಲೂ ತೀರಾ ಕಳಪೆ ಆಟ ಆಡುತ್ತಿರುವ ಕುರಿತು ದೇಶಾದ್ಯಂತ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ತಂಡದ ಆಯ್ಕೆ ಪಟ್ಟಿ ಪ್ರಕಟವಾದಾಗಲೇ ಶಿಖರ್ ಧವನಗೆ ಮತ್ತೆ ಮತ್ತೆ ಏಕೆ ಅವಕಾಶ ನೀಡುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ. ಧವನ್ ಅವರ ಆಟದಲ್ಲಿ ದೃಢತೆ ಇಲ್ಲ. ಅಪರೂಪಕ್ಕೊಮ್ಮೆ ಆಟವಾಡುವ ಇವರಿಗೆ ಇನ್ನಷ್ಟು, ಮತ್ತಷ್ಟು ಅವಕಾಶ ನೀಡುವ ಅಗತ್ಯ ಖಂಡಿತಾ ಇಲ್ಲ.
ಧವನಗೆ ಹೋಲಿಸಿದರೆ ತಾಂತ್ರಿಕವಾಗಿ ಅಜಿಂಕ್ಯಾ ರಹಾನೆ ಉತ್ತಮ ಆಟಗಾರ. ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿ ತಮ್ಮ ಸಾಮಥ್ರ್ಯ ತೋರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 63ಕ್ಕೆ ನಾಲ್ಕು ವಿಕೆಟ್ ಕಳಕೊಂಡಿದ್ದ ಭಾರತ ಗೆದ್ದಿದ್ದೇ ಒಂದು ಪವಾಡ. ನಾಯಕ್ ವಿರಾಟ್ ಕೊಹ್ಲಿ ಹಾಗೂ ಕೇದರ್ ಜಾದವ್ ಅವರ ಅಮೋಘ ಆಟದಿಂದ ಗೆಲುವು ಸಿಕ್ಕಿತ್ತು. ಎರಡು ವಿಕೆಟ್ ಉರುಳಿಸಿ ಒಂದು ಕ್ಯಾಚ್ ಪಡೆದು 40 ರನ್ ಬಾರಿಸಿರುವ ಹಾರ್ದಿಕ್ ಪಾಂಡ್ಯ ಕೊಡುಗೆಯೇನೂ ಕಡಿಮೆಯಲ್ಲ. ಅದೇ ರೀತಿ ಕೊಹ್ಲಿ ಮೇಲೆ ಅವಲಂಬನೆ ಸರಿಯಲ್ಲ. ಎರಡನೇ ಏಕದಿನ ಪಂದ್ಯದಲ್ಲಿ 30 ರನ್ನಿಗೆ ರಾಹುಲ್, ಧವನ್, ಕೊಹ್ಲಿ ವಿಕೆಟ್ ಉರುಳಿದಾಗ ಮಧ್ಯಮ ಸರದಿಯಲ್ಲಿ ಯುವರಾಜ್ ಮತ್ತು ಮಾಜಿ ನಾಯಕ ಧೋನಿ ತಂಡವನ್ನು ತಮ್ಮ ಅಮೋಘ ಆಟದಿಂದ ಎದುರಾಳಿ ತಂಡಕ್ಕೆ ಹೋರಾಟದ ಮೊತ್ತ ನೀಡುವಲ್ಲಿ ಸಫಲರಾದರು. ಭಾರತದಲ್ಲಿ ಇನ್ನೂ ಕೂಡಾ ಉತ್ತಮ ಆಟಗಾರರ ಖಂಡಿತಾ ಕೊರತೆ ಇದೆ. ಆಯ್ಕೆದಾರರಿಗೆ ಏಕೆ ಮಂಕು ಕವಿದಿದೆ

  • ಕೆ ಮನೋಹರ ಕೋಟ್ಯಾನ್
    ಉರ್ವಾಸ್ಟೋರ್-ಮಂಗಳೂರು