ಮಗನಿಗೆ ಆಂಗ್ಲ ಮಾಧ್ಯಮ ಶಿಕ್ಷಣ, ಮಗಳಿಗೆ ಕನ್ನಡ !

ಬೆಂಗಳೂರು : ಹೆಚ್ಚು ಹೆಚ್ಚು ಪೋಷಕರು ತಮ್ಮ ಗಂಡು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದರೆ, ಹೆಣ್ಣು ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವುದನ್ನು ಬಿಟ್ಟರೆ ಬೇರೆ ಆಯ್ಕೆಯಿರುವುದಿಲ್ಲ ಎನ್ನುವುದು ಶಿಕ್ಷಣ ರಂಗದಲ್ಲಿ ಹೆಚ್ಚುತ್ತಿರುವ ಲಿಂಗ ತಾರತಮ್ಯದ ಬಗ್ಗೆ ರಾಜ್ಯ ಸರಕಾರ ವಿಧಾನಪರಿಷತ್ತಿನ ಮುಂದೆ ಪ್ರಸ್ತುತ ಪಡಿಸಿದ ಅಂಕಿಸಂಖ್ಯೆಗಳಿಂದ ಸ್ಪಷ್ಟವಾಗಿದೆ. ಲಿಂಗ ಅಸಮಾನತೆಯನ್ನು ದೃಢೀಕರಿಸಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್, ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಇದು ಹೆಚ್ಚಾಗಿದ್ದರೂ ಇದೀಗ ನಗರ ಪ್ರದೇಶಗಳಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದರು. ಶಿಕ್ಷಣ ಹಕ್ಕು ಕಾಯಿದೆಯನ್ವಯ ಹೆತ್ತವರು ಕೇವಲ ತಮ್ಮ ಗಂಡು ಮಕ್ಕಳನ್ನು ಮಾತ್ರ ನಗರ ಪ್ರದೇಶದ ಅತ್ಯುತ್ತಮ ಶಾಲೆಗಳಿಗೆ ಸೇರಿಸುತ್ತಿರುವುದು ಕಂಡು ಬಂದಿದೆ ಎಂದು ಅವರು ಹೇಳಿದರು.