ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಪ್ರಧಾನಿ ಹಿಂಬಾಲಕ ಇಂಜಿನಿಯರ್ ಸೆರೆ

ಅಭಿನವ್ ವರ್ಮ

ಮೊಹಾಲಿ : ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಮೇಕ್-ಇನ್-ಇಂಡಿಯಾ ಕಾರ್ಯಕ್ರಮವೊಂದರಲ್ಲಿ ಸ್ವತಹ ಪ್ರಧಾನಿಯಿಂದಲೇ ಪ್ರಶಂಸೆಗೊಳಪಟ್ಟಿದ್ದ ಅಭಿನವ್ ವರ್ಮ (21) ಎಂಬ ಇಂಜಿನಿಯರ್ ಇದೀಗ ತನ್ನ ಇಬ್ಬರು ಸಹಚರರೊಂದಿಗೆ ನಕಲಿ ನೋಟು ತಯಾರಿಸಿದ ಆರೋಪದ ಮೇಲೆ ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಬಂಧಿತನಾಗಿದ್ದಾನೆ. ಅವರಿಂದ ರೂ 42 ಲಕ್ಷ ಮೌಲ್ಯದ 2000 ರೂಪಾಯಿಯ ನಕಲಿ ನೋಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಅಭಿನವ್ ಸೋದರ ಸಂಬಂಧಿ ವಿಶಾಖ  ಹಾಗೂ ಲುಧಿಯಾನ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸುಮನ್ ನಾಗಪಾಲ್ ಎಂಬವರನ್ನೂ ಈ ಸಂಬಂಧ ಬಂಧಿಸಲಾಗಿದೆ. ಅಭಿನವ್ ವರ್ಮನ ಚಂಡೀಗಢ ಕಚೇರಿಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತು. ಅವರು ಅವುಗಳನ್ನು ಹಳೆಯ ನೋಟುಗಳಿಗೆ ವಿನಿಮಯವಾಗಿ ಜನರಿಗೆ ನೀಡಿ ಮೋಸಗೊಳಿಸುತ್ತಿದ್ದರಲ್ಲದೆ ಇದಕ್ಕಾಗಿ ಶೇ 30ರಷ್ಟು ಕಮಿಷನ್ ಕೂಡ ಪಡೆಯುತ್ತಿದ್ದರು. ಅವರಿಂದ ಕೆಂಪು ದೀಪವಿದ್ದ ಆಡಿ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಹದಿನೆಂಟು ವರ್ಷದವನಿರುವಾಗಲೇ ಅಭಿನವ್  `ಲೈವ್ ಬ್ರೇಲ್’ ಎಂಬ ಸಾಧನ ತಯಾರಿಸಿದ್ದ. ದೃಷ್ಟಿಹೀನರಿಗೆ ವಾಕಿಂಗ್ ಸ್ಟಿಕ್ ಇಲ್ಲದೇ ನಡೆದಾಡಲು ಸಹಾಯ ಮಾಢುವ ಸಾಧನ ಇದಾಗಿತ್ತು. ಪ್ರಧಾನಿ ಮೋದಿ, ಅಭಿನವ್ ಸಾಧನೆಯನ್ನು ಬೆಂಗಳೂರಿನಲ್ಲಿ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಇಂಡಿಯನ್ ಸಾಯನ್ಸ್ ಕಾಂಗ್ರೆಸ್ಸಿನಲ್ಲಿ  ಹೊಗಳಿದ್ದರು.  ಈ ಸಾಧನೆಗಾಗಿ ಅಭಿನವ್ ಹಲವು ಪ್ರಶಸ್ತಿಗಳನ್ನು ಕೂಡ ಪಡೆದಿದ್ದ.