ಇಂಧನ ಸಚಿವರೇ ಕರೆಂಟ್ ತೆಗೆಯಲ್ಲ ದರ ಏರಿಸಲ್ಲ ಎಂದಿದ್ದಿರಿ ಈಗ ಮಾಡುತ್ತಿರುವುದೇನು

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇಲ್ಲ ಎಂದು ಹೇಳಿಕೊಳ್ಳುತ್ತಿರುವ ರಾಜ್ಯ ಸರಕಾರ ಗ್ರಾಮೀಣ ಭಾಗದಲ್ಲಿ ಅತಿಯಾದ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ಕಾಟ ಅಷ್ಟಾಗಿ ಇಲ್ಲದಿದ್ದರೂ ಗ್ರಾಮೀಣ ಭಾಗದಲ್ಲಿ ದಿನದಲ್ಲಿ 10ರಿಂದ 12 ತಾಸು ವಿದ್ಯುತ ಕಡಿತಗೊಳಿಸಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು ರೈತರು ಸಂಕಟ ಪಡುತ್ತಿದ್ದಾರೆ. ಇತ್ತ ಮಳೆ ಬಾರದೆ ಕೃಷಿ ಮಾಡಲಾಗದ ರೈತ ಕೊಳವೆ ಬಾವಿಯಿಂದಲಾದರೂ ಅಲ್ಪಸ್ವಲ್ಪ ಬೆಳೆ ಬೆಳೆದು ಜೀವನ ದೂಡುತ್ತಿದ್ದಾನೆ. ಇದಕ್ಕೂ ಸರಕಾರ ಕಲ್ಲು ಹಾಕಿದರೆ ಅನ್ನದಾತನ ಸ್ಥಿತಿ ಏನಾಗಬೇಡ  ಆದ್ದರಿಂದ ದಯವಿಟ್ಟು ಇಂಧನ ಸಚಿವರೇ, ತಮ್ಮ ಹೇಳಿಕೆಯಂತೆ ರೈತರಿಗೆ ಅವಶ್ಯಕ ವಿದ್ಯುತ್ ಪೂರೈಕೆ ಮಾಡಿ, ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಿ. ನಾವು ಜನಪರ, ರೈತಪರ ಎಂದು ಚುನಾವಣೆ ವೇಳೆ ಭಾಷಣ ಮಾಡುವ ಜನಪ್ರತಿನಿಧಿಗಳು ಇಂದು ರೈತನ ನಿಜವಾದ ಸಮಸ್ಯೆಗೆ ಸ್ಪಂದಿಸಲಿ

  • ಸುರಾಜ್ ಕೋಟ್ಯಾನ್  ಪದವಿನಂಗಡಿ  ಮಂಗಳೂರು