ಎಂಡೋಸಲ್ಫಾನ್ ಅಂಧಕಾರದಲ್ಲಿ ಬದುಕಿನ ಭರವಸೆ ಕಳೆದುಕೊಳ್ಳುತ್ತಿರುವ ಬಡ ಕುಟುಂಬ

ಆತ್ಮಹತ್ಯೆಗೆ ನಿರ್ಧರಿಸಿದ ಯಮುನಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಎಂಡೋಸಲ್ಫಾನ್ ಪೀಡಿತ ಕುಟುಂಬವೊಂದು ಕೊಕ್ಕಡದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಬಳಿಕ ನನಗೂ ಇದೇ ರೀತಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿದೆ. ನನ್ನ ಮಕ್ಕಳೊಂದಿಗೆ ನಾನೂ ಸಾಯಲು ನಿರ್ಧರಿಸಿದ್ದೇನೆ” ಎಂದು ಹೇಳುತ್ತಾರೆ 45ರ ಹರೆಯದ ಎಂಡೋಸಲ್ಫಾನ್ ಪೀಡಿತೆ ಯುಮುನಾ.

ತನ್ನಿಬ್ಬರು ಎಂಡೋಸಲ್ಫಾನ್ ಪೀಡಿತ ಮಕ್ಕಳ ಹೆಸರನ್ನು ಎಂಡೋಪೀಡಿತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಪ್ರತಿನಿತ್ಯ ಓಡಾಟ ನಡೆಸುತ್ತಿರುವ, ಮಕ್ಕಳನ್ನು ಸಾಕಲು ಇನ್ನಿಲ್ಲದ ಯಾತನೆ ಪಡುತ್ತಿರುವ ಯಮುನಾ, “ನನ್ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಾನು ಹಾಸಿಗೆ ಹಿಡಿದರೆ ನನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವವರು ಯಾರು” ಎಂದು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ವಾರವೊಂದರ ಹಿಂದೆಯಷ್ಟೇ ಇವರು ಪುತ್ತೂರು ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗಿಗೆ ಒಳಗಾಗಿದ್ದರು.

ನಗರದಿಂದ 45 ಕಿ ಮೀ ದೂರದ ಕಡೇಶ್ವಾಲ್ಯ ಗ್ರಾಮ ಪಂಚಾಯತಿನ ಪಡ್ಪು ಮನೆ ನಿವಾಸಿ ಯಮುನಾರ ಇಬ್ಬರು ಮಕ್ಕಳು ಎಂಡೋಸಲ್ಪಾನ್ ಪೀಡಿತರು. ಮಿಥುನ್ (23) ಮತ್ತು ತೃಪ್ತಿ (13) ಎಂಡೋಸಲ್ಫಾನ್ ಪೀಡಿತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಇವರು ಪ್ರತಿನಿತ್ಯ ಅಲೆದಾಡುತ್ತಿದ್ದಾರೆ. ಹುಟ್ಟುವಾಗಲೇ ಇವರು ಎಂಡೋ ಪೀಡಿತರಾಗಿರಲಿಲ್ಲ. ಆದರೆ ವಿಧಿಯಾಟ ಇವರ ಮಕ್ಕಳನ್ನು ಎಂಡೋಪೀಡಿತರನ್ನಾಗಿಸಿತ್ತು. ಚಿಕ್ಕಂದಿನಲ್ಲಿ ಜ್ವರಕ್ಕೆ ತುತ್ತಾದರು. ಈ ಕಾರಣಕ್ಕೆ ಇಬ್ಬರು ಮಕ್ಕಳೂ ಎಂಡೋಪೀಡಿತರಾದರು.

ಯಮುನಾ ಪತಿ ಸುಂದರ ಮೂಲ್ಯ ರೋಗಪೀಡಿತೆ ಪತ್ನಿಗೆ ಕೆಲಸದಲ್ಲಿ ನೆರವಾಗುತ್ತಿದ್ದಾರೆ. ಇವರ ಇನ್ನೊಬ್ಬ ಪುತ್ರ ಭರತ್ (21) ಶಾಲೆ ತೊರೆದಿದ್ದು, ಗ್ಯಾರೇಜಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ. ನನ್ನ ಮಕ್ಕಳನ್ನು ನೋಡಿಕೊಳ್ಳುವ ಕಾರಣ ನನಗೆ ಬೀಡಿ ಕಟ್ಟಲಿಕ್ಕೂ ಪುರುಸೊತ್ತು ಇರುವುದಿಲ್ಲ ಎಂದು ವಿಷಾದಿಸುತ್ತಾರೆ ಯಮುನಾ. ಮಿಥುನ್ ಮತ್ತು ತೃಪ್ತಿ ಜ್ವರ ಮತ್ತು ಬೇಧಿಯಿಂದ ಬಳಲುತ್ತಾರೆ. ಸರಕಾರದಿಂದ ಸಿಗುವ ಮಾಸಾಸನ 1200ಕ್ಕೇರಿಸಿದ್ದರೂ ಅದು ಔಷಧಕ್ಕೇ ಸಾಕಾಗುತ್ತಿಲ್ಲ ಎನ್ನುತ್ತಾರೆ ಯಮುನಾ.

ಪ್ರಸ್ತುತ ಎಂಡೋಸಲ್ಫಾನ್ ಪೀಡಿತರ ಗುರುತು ಪತ್ತೆಗೆ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಆದರೆ ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಇಲ್ಲಿ ಯಾರೂ ಎಂಡೋಪೀಡಿತ ಸಂತ್ರಸ್ತರಿಲ್ಲ ಎಂದು ಘೋಷಣೆ ಮಾಡಿದೆ. ಇಲ್ಲಿನ ಗ್ರಾಮಾಭಿವೃದ್ಧಿ ಅಧಿಕಾರಿ (ಪಿಡಿಒ) ಜಯಮಾಲಾ ಅವರು ಇಲ್ಲಿ ಭಿನ್ನ ಸಾಮಥ್ರ್ಯದವರಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇವರು ಯಾರೂ ಎಂಡೋಸಲ್ಫಾನ್ ಪೀಡಿತರಲ್ಲ. ಗೇರುತೋಟಕ್ಕೆ ಎಂಡೋಸಲ್ಫಾನ್ ಸಿಂಪಡಣೆ ಮಾಡುವ ಸಂದರ್ಭದಲ್ಲಿ ಇಲ್ಲಿನ ಜನರು ಯಾರೂ ರೋಗಕ್ಕೆ ಈಡಾಗಿಲ್ಲ ಎನ್ನುತ್ತಿದ್ದಾರೆ ಈ ಪಿಡಿಒ. ಆರ್ ಟಿ ಐ ಕಾರ್ಯಕರ್ತ ಸಂಜೀವ ಕಡಬ ಅವರು ಯಮುನಾ ಅವರ ಆತ್ಮಹತ್ಯೆ ವಿಚಾರ ತಿಳಿದು ಇಂತಹ ನಿರ್ಧಾರ ಕೈಗೊಳ್ಳದಂತೆ ಮನವೊಲಿಸಿದ್ದಾರೆ.

ಇದೇ ವೇಳೆ ಯಮುನಾ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಇಲ್ಲಿ ಎಂಡೋಸಲ್ಫಾನ್ ಪೀಡಿತರ ಗುರುತು ಪತ್ತೆಗೆ ಶಿಬಿರವನ್ನು ಆಯೋಜಿಸುವಂತೆ ಮನವಿ ಮಾಡಿದ್ದಾರೆ. ಇವರ ಆಗ್ರಹಕ್ಕೆ ಕಡೇಶ್ವಾಲ್ಯ ಗ್ರಾ ಪಂ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ ಕೂಡಾ ದನಿಗೂಡಿಸಿದ್ದು, ಸುಮಾರು 10ಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ಎಂಡೋಸಲ್ಫಾನ್ ಪೀಡಿತರಿದ್ದು, ಅವರ ಗುರುತು ಪತ್ತೆ ಹಚ್ಚಬೇಕಾಗಿದೆ ಎಂದು ಹೇಳಿದ್ದಾರೆ.