ಮಾತಿಗೆ ತಪ್ಪಿದ ಸರಕಾರ : ಎಂಡೋಪೀಡಿತರಿಗೆ ನಿರಾಶೆ

ನಮ್ಮ ಪ್ರತಿನಿಧಿ ವರದಿ 

ಕಾಸರಗೋಡು : ಜಿಲ್ಲೆಯ ಎಂಡೋ ಸಲ್ಫಾನ್ ಪೀಡಿತರ ನಿರೀಕ್ಷೆ ಇನ್ನೂ ಫಲ ಕಂಡಿಲ್ಲ. ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಎಂಡೋಪೀಡಿತರಿಗೆ ಎಪ್ರಿಲ್ 10 ಕ್ಕೆ ಮುಂಚಿತವಾಗಿ ಮೂರನೇ ಘಟ್ಟದ ಸಹಾಯ ಹಸ್ತಾಂತರದ ಆದೇಶ ಕಡತದಲ್ಲಿಯೇ ಬಾಕಿ ಉಳಿದಿದೆ. ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬಹುದೆಂಬ 3439 ಎಂಡೋ ಪೀಡಿತರ ನಿರೀಕ್ಷೆ ಹುಸಿಯಾಗಿದೆ.

ಎಂಡೋ ಪೀಡಿತರ ಮೂರನೇ ಘಟ್ಟದ ಸಹಾಯ ವಿತರಣೆಯನ್ನು ಮಾರ್ಚ್ 30ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದರು. ಎಂಡೋ ಪೀಡಿತ 110 ಮಂದಿಗೆ ಅಂದು ರೂ 1.30 ಕೋಟಿ ಧನ ಸಹಾಯವನ್ನು ವಿತರಿಸಲಾಗಿತ್ತು. ಬಾಕಿ ಉಳಿದವರಿಗೆ ಎಪ್ರಿಲ್ 10ರೊಳಗೆ ಅವರವರ ಬ್ಯಾಂಕ್ ಖಾತೆಗೆ ಜಮಾಗೊಳಿಸುವುದಾಗಿ ವಾಗ್ದಾನ ನೀಡಲಾಗಿತ್ತು. ಆದರೆ ಖಾತೆ ತೆರೆದು ನಿರೀಕ್ಷೆ ಇಟ್ಟವರಿಗೆ ನಿರಾಶೆಯಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸ್ಸಿನಂತೆ ಎಂಡೋಪೀಡಿತರಿಗೆ ಅಂಗೀಕಾರವಾದ ಹಣವನ್ನು ಮುಖ್ಯಮಂತ್ರಿ ಉದ್ಘಾಟನೆಗೊಳಿಸಿ ಭರವಸೆ ನೀಡಿದ್ದರೂ ಕೈಗೆ ಬಾರದೆ ಇದ್ದಾಗ, ಎಂಡೋ ಪೀಡಿತರು ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.