ವಾಣಿಜ್ಯ ಸಂಕೀರ್ಣಗಳಿಂದ ಸಾರ್ವಜನಿಕ ಪ್ರದೇಶ ಪಾರ್ಕಿಂಗ್ ಸ್ಥಳವಾಗಿ ಆಕ್ರಮಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರಯುಕ್ತ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರಕ್ಕೊಂದು ಆಕಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

“ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ಪರಿಣಾಮವಾಗಿ ನಗರ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ. ಸಮರ್ಪಕ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲು ಪಾಲಿಕೆ ವಿಫಲವಾಗಿದೆ. ಒಬ್ಬ ವ್ಯಕ್ತಿ ತನ್ನ ವಾಹನವನ್ನು ವ್ಯಾಪಾರ ಸಂಸ್ಥೆಯ ಮುಂದೆ ನಿಲ್ಲಿಸಿದರೆ ಖಾಸಗಿ ಭದ್ರತಾ ಸಿಬ್ಬಂದಿ ಕ್ಷಣಾರ್ಧದಲ್ಲಿ ಆ ಸ್ಥಳದಿಂದ ವಾಹನ ತೆಗೆಯುವಂತೆ ಆದೇಶಿಸುತ್ತಾನೆ. ಅಧಿಕಾರಿಗಳು ಇದನ್ನು ನೋಡಿ ಸುಮ್ಮನಿದ್ದಾರೆ. ಸಾರ್ವಜನಿಕ ಆಸ್ತಿ ಮತ್ತು ನಗರದ ಮುಖ್ಯ ರಸ್ತೆಗಳು ಅತೀ ವೇಗವಾಗಿ ಖಾಸಗಿ ಕಟ್ಟಡಗಳ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಾಡಾಗುತ್ತಿವೆ” ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.

“ವಾಣಿಜ್ಯ ಸಂಕೀರ್ಣಗಳು ಹಿಂಬದಿ ಪ್ರದೇಶಗಳಲ್ಲಿ ಪಾರ್ಕಿಂಗ್ ಪ್ರದೇಶಗಳನ್ನು ಒದಗಿಸಬೇಕು ಎಂಬ ನಿಯಮ  ಇದೆ. ಆದರೆ ಎಲ್ಲಾ ನಿಯಮಗಳನ್ನು ನಗರದ ಕಟ್ಟಡ ಮಾಲಿಕರು ಗಾಳಿಗೆ ತೂರಿದ್ದಾರೆ. ಹೆಚ್ಚಿನದಾಗಿ ವಾಣಿಜ್ಯ ಸಂಕೀರ್ಣಗಳ ಮುಂದಿರುವ ಮನಪಾ ಜಾಗವನ್ನು ಆಕ್ರಮಿಸಿಕೊಂಡು ಆ ಸ್ಥಳದಲ್ಲಿ ನೋ ಪಾರ್ಕಿಂಗ್ ಬೋರ್ಡುಗಳನ್ನು ಹಾಕಲಾಗುತ್ತಿದೆ. ಇದು ಸಂಪೂರ್ಣ ನಿಯಮ ಉಲ್ಲಂಘನೆಯನ್ನು ತೋರಿಸುತ್ತದೆ” ಎಂದು ಶೆಟ್ಟಿ ಹೇಳಿದ್ದಾರೆ.

ಕಾನೂನಿನ ಪ್ರಕಾರ ನೋ ಪಾರ್ಕಿಂಗ್ ಬೋರ್ಡನ್ನು ಮನಪಾ ಮಾತ್ರ ಹಾಕಬೇಕು ಹೊರತು ಖಾಸಗಿ ವಾಣಿಜ್ಯ ಕಟ್ಟಡಗಳ ಮಾಲಿಕರು ಹಾಕಬಾರದು. ದುರದೃಷ್ಟವಶಾತ್ ನಗರದಲ್ಲಿ ಇದು ತದ್ವಿರುದ್ಧವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ನೋ ಪಾರ್ಕಿಂಗ್ ಸ್ಥಳ“ನಗರದಲ್ಲಿ 80 ಶೇಕಡಾ ಕಟ್ಟಡಗಳು ಪಾರ್ಕಿಂಗ್ ಸ್ಥಳವನ್ನು ಹೊಂದಿಲ್ಲ. ಹೆಚ್ಚಿನ ಕಟ್ಟಡಗಳು ಪಾರ್ಕಿಂಗ್ ಸ್ಥಳಕ್ಕಾಗಿ ಚೈನ್ ತಡೆಗಳನ್ನು ನಿರ್ಮಿಸಿಕೊಂಡಿವೆ. ಮೇಯರ್ ಕವಿತಾ ಸನಿಲ್ ಮುಂದಾಳತ್ವದಲ್ಲಿ ಮನಪಾ ಅಧಿಕಾರಿಗಳ ತಂಡವು ಇತ್ತೀಚೆಗೆ ಇಂತಹ ತಡೆಗಳನ್ನು ಕಿತ್ತು ಹಾಕಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಮತ್ತೆ ಅವುಗಳು ಎದ್ದು ನಿಂತಿವೆ. ನಗರಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ” ಎಂದು ಶೆಟ್ಟಿ ಹೇಳಿದ್ದಾರೆ.