ಅತಿಕ್ರಮಿತ ಸರಕಾರಿ ಜಾಗ ತೆರವು

ಅಕ್ರಮ ಕಟ್ಟಡ ತೆರವುಗೊಳಿಸಲಾಯಿತು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾ ಪಂ ವ್ಯಾಪ್ತಿಯ ಕಲ್ಲೇರಿಯಲ್ಲಿ ಸರಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಮಂಗಳವಾರ ಕಂದಾಯಾಧಿüಕಾರಿಗಳ ನೇತೃತ್ವದ ತಂಡ ತೆರವುಗೊಳಿಸಿದೆ.

ಕಲ್ಲೇರಿ ಜಂಕ್ಷನ್ ಬಳಿಯ ಮಡಂತ್ಯಾರ್ ತಿರುವು ರಸ್ತೆಯ ಸಮೀಪ ಸರ್ವೇ ನಂ 3 1ಪಿ1-ಪಿ1ನಲ್ಲಿ ಕಂದಾಯ ಇಲಾಖೆಗೆ ಸೇರಿದ ಸುಮಾರು 4.30 ಎಕ್ರೆ ಜಾಗವಿದ್ದು, ಈ ಜಾಗವನ್ನು ತಣ್ಣೀರುಪಂಥ ಗ್ರಾ ಪಂ ಸ್ವಾಧೀನಪಡಿಸಿಕೊಂಡು ಅಲ್ಲಿ ಕೆಇಬಿ, ಕೃಷಿ ಉತ್ಪಾದಕ ಸಂಘಕ್ಕೆ ಜಾಗ ನೀಡಿ ಉಳಿದ ಜಾಗವನ್ನು ಸರಕಾರಿ ಶೈಕ್ಷಣಿಕ ಸಂಸ್ಥೆಗೆ ಕಾಯ್ದಿರಿಸಲು ಯೋಜನೆ ರೂಪಿಸಿತ್ತು. ಈ ಬಗ್ಗೆ ಪಂಚಾಯತ್ ಸರಕಾರಕ್ಕೆ ಪತ್ರ ಬರೆದಿತ್ತು. ಇದರ ಇಲಾಖಾತ್ಮಕ ಕೆಲಸಗಳು ಪ್ರಗತಿಯಲ್ಲಿತ್ತು. ಈ ನಡುವೆ ಕಳೆದ ಭಾನುವಾರ ಏಕಾಏಕಿ ಸಿಮೆಂಟ್ ಶೀಟ್ ಹಾಕಿದ ಕಟ್ಟಡವೊಂದು ನಿರ್ಮಾಣವಾಗಿದ್ದು, ಅಲ್ಲಿ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ವಾಸ್ತವ್ಯ ಹೂಡಿದ್ದರು. ಅಕ್ರಮ ಕಟ್ಟಡ ನಿರ್ಮಾಣವಾಗಿರುವ ಬಗ್ಗೆ ಗ್ರಾ ಪಂ ಪಂಚಾಯತ್ ಬೆಳ್ತಂಗಡಿ ತಹಶೀಲ್ದಾರಗೆ ದೂರು ನೀಡಿತ್ತು. ಈ ದೂರನ್ನು ಪರಿಗಣಿಸಿದ ತಹಶೀಲ್ದಾರ್ ಅವರು ಸರಕಾರಿ ಜಾಗದಲ್ಲಿ ನಿರ್ಮಾಣವಾದ ಅಕ್ರಮ ಕಟ್ಟಡದ ತೆರವಿಗೆ ಆದೇಶ ನೀಡಿದ್ದರು.

ಅದರಂತೆ ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪ್ರತೀಕ್ಷಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜೆಸಿಬಿ ಮೂಲಕ ಮಂಗಳವಾರ ಮಧ್ಯಾಹ್ನ ಕಟ್ಟಡ ತೆರವುಗೊಳಿಸಿತು.

ಉಪ್ಪಿನಂಗಡಿ ಪೊಲೀಸರು ಬಿಗು ಬಂದೋಬಸ್ತ್ ಒದಗಿಸಿದರು.