ಭಾವನೆಗಳ ಚೆಲ್ಲಾಟ

ಬದುಕು ಬಂಗಾರ-216

ಮನುಷ್ಯರೆಂದ ಮೇಲೆ ಮನಸ್ಸಿನಲ್ಲಿ ಪ್ರತಿ ನಿಮಿಷ, ಪ್ರತಿ ಕ್ಷಣ ಏನಾದರೂ ಭಾವನೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಭಾವೋದ್ವೇಗ, ಸಿಟ್ಟು, ಅಸಹನೆ, ಆತಂಕ ಒಂದಿಲ್ಲೊಂದು ಸಮಯ ಕಾಡುತ್ತಲೇ ಇರುತ್ತದೆ.  ನಮ್ಮ ಮನಸ್ಸಿನಲ್ಲಿ ಹಾದುಹೋಗುವ ವಿಭಿನ್ನ ಭಾವನೆಗಳಿಗೂ ನಮ್ಮ ಆರೋಗ್ಯಕ್ಕೂ ನೇರಾನೇರ ಸಂಬಂಧವಿದೆ ಎನ್ನುತ್ತಾರೆ ತಿಳಿದವರು. ಕೆಲವೊಮ್ಮೆ ನಮ್ಮ ಭಾವೋದ್ವೇಗ ನಮ್ಮ ಬದುಕಿನಲ್ಲೇ ಚೆಲ್ಲಾಟವಾಡಬಹುದು.

ಸಿಟ್ಟು : ಕೋಪಾವಿಷ್ಟರಾದಾಗ ವ್ಯಕ್ತಿಯೊಬ್ಬನಿಗೆ ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವೂ ಇರುವುದಿಲ್ಲ. ಸಿಟ್ಟು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ತಜ್ಞರು. ಸಿಟ್ಟು ಮನುಷ್ಯನ ಆಲೋಚನಾ ಶಕ್ತಿಯನ್ನು ಆ ಕ್ಷಣ ಕುಂಠಿತಗೊಳಿಸಬಹುದು. ಸಿಟ್ಟುಗೊಂಡಾಗ ಹೃದಯದ ಬಡಿತ ಹೆಚ್ಚಾಗುವುದಲ್ಲದೆ ರಕ್ತದೊತ್ತಡವೂ ಏರಿಕೆಯಾಗಿ ಸಮಸ್ಯೆಗೂ ಕಾರಣವಾಗಬಹುದು.

ಚಿಂತೆ : ಇದು ಇನ್ನೊಂದು ಸಮಸ್ಯೆ. ಸದಾ ಚಿಂತೆಯಲ್ಲಿಯೇ ಮುಳುಗಿಬಿಟ್ಟರೆ ಅದು ಆರೋಗ್ಯಕ್ಕೆ ಮುಳುವಾಗುವುದರಲ್ಲಿ ಸಂಶಯವೇ ಇಲ್ಲ. ಇದರ ಹೊರತಾಗಿ ಮನುಷ್ಯನೊಬ್ಬನ ಸಾಮಾಜಿಕ ಜೀವನದ ಮೇಲೂ ಈ ಚಿಂತೆ ಪರಿಣಾಮ ಬೀರಬಹುದು.

ದುಃಖ :  ಜೀವನದಲ್ಲಿ ಪ್ರತಿಯೊಬ್ಬರಿಗೂ ದುಃಖ ಕಾಡದೇ ಇರದು. ಅತಿಯಾದ ದುಃಖದಿಂದಾಗಿ ನಮಗೆ ಸುಸ್ತು, ಉಸಿರಾಟದ ಸಮಸ್ಯೆಯೂ ಕಾಡಬಹುದು ಎನ್ನುತ್ತಾರೆ ತಜ್ಞರು. ದುಃಖದಿಂದ ವ್ಯಕ್ತಿಯೊಬ್ಬನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ ಅನೇಕ ಬಾರಿ ದುಃಖವನ್ನು ಮರೆಯಲು ಕೆಟ್ಟ ಅಭ್ಯಾಸಗಳಿಗೆ ಮೊರೆ ಹೋಗುವ ಸಂಭವವೂ ಇದೆ.

ಒತ್ತಡ : ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಇನ್ನೊಂದು ವೈರಿ. ಸ್ವಲ್ಪ ಮಟ್ಟಿನ ಒತ್ತಡ ನಮ್ಮ ಕಾರ್ಯನಿರ್ವಹಣೆಯನ್ನು ಸುಧಾರಿಸಬಹುದಾದರೂ  ಅತಿಯಾದ ಒತ್ತಡ ಇನ್ನಿಲ್ಲದ ಸಮಸ್ಯೆ ಸೃಷ್ಟಿಸಬಹುದು.

ಒಂಟಿತನ : ಒಂಟಿತನ ಕಾಡಿದಾಗ ಮನುಷ್ಯ ದುಃಖಿಯಾಗುತ್ತಾನೆ. ಆತ ಅಥವಾ ಆಕೆ ಸುಮ್ಮನೆ ಕುಳಿತು ಅಳಬಹುದು. ಕೊನೆಗೆ ಈ ಒಂಟಿತನ ತಾಳಲಾರದೆ ಅಲ್ಲಿ ಸಿಟ್ಟು, ಅಸಹಾಯಕತೆಯೂ ತಳವೂರಬಹುದು.

ಭಯ : ಭಯವೆನ್ನುವುದು ಮನುಷ್ಯನೊಬ್ಬನ ಆತ್ಮವಿಶ್ವಾಸವನ್ನೇ ಕೊಚ್ಚಿಹೋಗುವಂತೆ ಮಾಡಬಹುದು.  ಭಯದಿಂದ ಆತಂಕ ಕಾಡಿ  ದೇಹದಲ್ಲಿನ ಶಕ್ತಿಯೇ ಉಡುಗಿ ಹೋದಂತಹ  ಅನುಭವವೂ ಆಗಬಹುದು.

ಅಂತೆಯೇ ಆಘಾತ, ಅಸಹನೆ, ದ್ವೇಷ, ಮತ್ಸರ ಹೀಗೆ ನಮ್ಮ ಮನಸ್ಸನ್ನು ಹಲವು ವಿಧದಲ್ಲಿ ಕಾಡುವ ಕೆಲವೊಂದು ವೈರಿಗಳನ್ನು ಹೊಡೆದೋಡಿಸುವ ಪ್ರಯತ್ನ ನಮ್ಮದಾಗಬೇಕು.

LEAVE A REPLY