ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇಲ್ಲಿನ ವಿಮಾನ ನಿಲ್ದಾಣದಿಂದ 170 ಮಂದಿ ಪ್ರಯಾಣಿಕರನ್ನು ಹೊತ್ತು ದೋಹಾಕ್ಕೆ ಗುರುವಾರ ಸಂಜೆ ಹೊರಟಿದ್ದ ವಿಮಾನ ತಾಂತ್ರಿಕ ದೋಷದಿಂದ, ಟೇಕಾಫ್ ಆದ ಕೆಲವೇ ತಾಸುಗಳಲ್ಲಿ ಮತ್ತೆ ಭೂಸ್ಪರ್ಶ ಮಾಡಿದೆ.

ಏರ್ ಇಂಡಿಯಾ ಎಕ್ಸಪ್ರೆಸ್ ಎಕ್ಸ್ 821 ವಿಮಾನವು ಗುರುವಾರ ಸಂಜೆ 5.35ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ದೋಹಾ ಕಡೆಗೆ ಹೊರಟಿತ್ತು. ಆದರೆ ವಿಮಾನ ಹಾರಾಟ ಆರಂಭಿಸಿದ ಅರ್ಧ ತಾಸಿನಲ್ಲೆ ವಿಮಾನದ ಒಂದು ಇಂಜಿನಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ವಿಚಾರ ಪೈಲಟ್ ಗಮನಕ್ಕೆ ಬರುತ್ತಿದ್ದಂತೆ ವಿಮಾನವನ್ನು ವಾಪಾಸ್ ನಿಲ್ದಾಣಕ್ಕೆ ಹಿಂತಿರುಗಿಸಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ತೊಂದರೆಗೊಳಗಾದ ಎಲ್ಲಾ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಅವರನ್ನು ಕಳುಹಿಸಿಕೊಡಲಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನವು ಏಕಾಏಕಿ ರದ್ದುಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಕೆಲವು ಪ್ರಯಾಣಿಕರಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದರು ಎನ್ನಲಾಗಿದೆ.